

ಮಂಡ್ಯ: ನೆರೆ, ಬೆಂಕಿ ಅವಘಡ, ಭೂಕಂಪ ಸೇರಿದಂತೆ ವಿಪತ್ತುಗಳು ಯಾವ ಸಮಯದಲ್ಲಿ ಬೇಕಾದರೂ ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ವಿವೇಚನೆ ಹಾಗೂ ಸಮಯ ಪ್ರಜ್ಞೆಯಿಂದ ಜೀವವನ್ನು ಉಳಿಸಬಹುದು. ಮಾತ್ರವಲ್ಲದೆ ಮುಂದಾಗುವ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣೆ ಜಾಗೃತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್‌ಡಿಆರ್‌ಎಫ್ ತಂಡದವರು ಜಿಲ್ಲೆಯಲ್ಲಿ ಜ.10 ರಿಂದ 21ರವರೆಗೆ ವಿವಿಧ ಸ್ಥಳಗಳಲ್ಲಿ ವಿಪತ್ತು ನಿರ್ವಹಣೆ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ನಾಲೆಗಳು ಹೆಚ್ಚಿವೆ. ಅಂತೆಯೇ ಇತ್ತೀಚಿನ ದಿನಗಳಲ್ಲಿ ನೆರೆ ಪರಿಸ್ಥಿತಿ ಹೆಚ್ಚಿದೆ. ನೆರೆ, ಬೆಂಕಿ ಅನಾಹುತಗಳು, ಅಪಘಾತದಲ್ಲಿ ರಕ್ತಸ್ರಾವ ಪರಿಸ್ಥಿತಿ, ನೀರಿನಲ್ಲಿ ಮುಳುಗಡೆಯಾದ ವ್ಯಕ್ತಿ ರಕ್ಷಿಸುವ ಸಂದರ್ಭ, ಸ್ವಯಂ ರಕ್ಷಣೆ ಕಲೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜ.10ರಂದು ನಗರದ ಕಲ್ಲು ಕಟ್ಟಡ(ಸರ್ಕಾರಿ ಬಾಲಕಿಯರ ಕಾಲೇಜು), 16ರಂದು ಹರ್ಡೀಕರ್ ಭವನದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ, 20ರಂದು ನೆಹರು ಯುವ ಕೇಂದ್ರದಲ್ಲಿ ಯುವ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಂತೆಯೇ ಜ.12 ರಂದು ಪಾಂಡವಪುರ ತಾಲೂಕು ಸುಂಕತೊಣ್ಣೂರು ಗ್ರಾಪಂನಲ್ಲಿ, 13ರಂದು ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಪಂ, 18ರಂದು ಮಳವಳ್ಳಿಯ ಹಲಗೂರು ಗ್ರಾಪಂ, 11ರಂದು ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ, 17ರಂದು ಕೆ.ಆರ್.ಪೇಟೆ ಐಸಿಎಲ್ ಕಾರ್ಖಾನೆ, 19ರಂದು ಕೆಆರ್‌ಎಸ್‌ನಲ್ಲಿ ನಡೆಯಲಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸುವಂತೆ ಅಧಿಕಾರಿಗಳು ತಿಳಿಸಿದ ಡಿಸಿ, ಎನ್‌ಡಿಆರ್‌ಎಫ್ ಅಧಿಕಾರಿಗಳೊಂದಿಗೆ ಕಂದಾಯ, ಅಗ್ನಿಶಾಮಕದಳ, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಎನ್‌ಡಿಆರ್‌ಎಫ್ ಅಧಿಕಾರಿಗಳಾದ ದೇವರಾಜು, ಜಿ.ಎಲ್.ಅಕಾಶ್, ಶಿವಕುಮಾರ್, ಅಗ್ನಿಶಾಮಕ ಅಧಿಕಾರಿ ಗುರುರಾಜ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.