ಜಿಲ್ಲೆಯಲ್ಲಿ 15042 ಮಕ್ಕಳಿಗೆ ಲಸಿಕೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾಹಿತಿ

26_12_Mdy_03(Dc Meeting)
Published on

ಮಂಡ್ಯ: ಪ್ರತಿ ಮಗುವಿಗೆ 9ರಿಂದ 12 ಮತ್ತು 16ರಿಂದ 24 ತಿಂಗಳಲ್ಲಿ ದಡಾರ ಹಾಗೂ ರುಬೆಲ್ಲಾ ಲಸಿಕೆಯನ್ನು ತಪ್ಪದೆ ಕೊಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದಡಾರ ಹಾಗೂ ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮ ಕುರಿತ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಈ ವರ್ಷ ಏಪ್ರಿಲ್ನಿಂದ ನವೆಂಬರ್‌ವರೆಗೆ ಜಿಲ್ಲೆಯಲ್ಲಿ 15,187 ಮಕ್ಕಳ ಪೈಕಿ 15042 ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಮಂಡ್ಯ ಮೊದಲ ಸ್ಥಾನದಲ್ಲಿದೆ ಎಂದರು.
ಲಸಿಕೆಯನ್ನು ಪಡೆಯದೆ ಇರುವ ಮಕ್ಕಳಿಗಾಗಿ ಈಗಾಗಲೇ ಸರ್ವೇ ಕೈಗೊಳ್ಳಲಾಗಿದೆ. ಈ ಮೂಲಕ ಮಕ್ಕಳಿಗೆ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ತಾಲೂಕು ಮಟ್ಟದಲ್ಲಿ ಲಸಿಕೆಯನ್ನು ಕುರಿತು ಈಗಾಗಲೇ ಅಂಗನವಾಡಿ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ದಡಾರ ಮತ್ತು ರುಬೆಲ್ಲಾ ರೋಗವನ್ನು 2023ರ ಅಂತ್ಯದೊಳಗೆ ನಿರ್ಮೂಲನೆ ಮಾಡಲು ಎಲ್ಲ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ದಡಾರ ಮತ್ತು ರುಬೆಲ್ಲಾ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ನಿರ್ದೇಶನದಂತೆ ವಿಶೇಷವಾಗಿ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಎಂದರು.
ವಲಸೆ ಕಾರ್ಮಿಕರ, ಸ್ಲಂಗಳ ಹಾಗೂ ಇನ್ನಿತರ ಸ್ಥಳಗಳಲ್ಲಿ ವಾಸಿಸುವ ಮಕ್ಕಳು ಲಸಿಕೆ ಪಡೆಯದೇ ಇದ್ದಲ್ಲಿ ಅವರನ್ನು ಗುರುತಿಸಿ ದಡಾರ ಮತ್ತು ರುಬೆಲ್ಲಾ ಲಸಿಕೆ ಕೊಡಿಸುವ ಕಾರ್ಯಕ್ರಮ ಆಯೋಜಿಸಲು ಕ್ರಮ ತೆಗೆದುಕೊಳ್ಳಿ ಎಂದರು.
ಸಭೆಯಲ್ಲಿ ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಆರೋಗ್ಯ ಇಲಾಖೆಯ ಡಾ.ರವೀಂದ್ರ, ಡಾ.ಮರೀಗೌಡ, ಡಾ.ಜವರೇಗೌಡ, ಡಾ.ಶಶಿಧರ್, ಡಾ.ಭವಾನಿ ಶಂಕರ್, ಡಾ.ಕೆ.ಪಿ.ಅಶ್ವಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net