ನೋಂದಣಿ ಮಾಡಿಸಿ ಭಾಗವಹಿಸದಿದ್ದರೆ ಕ್ರಮ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಎಚ್ಚರಿಕೆ

13_12_Mdy_03(Dc Meeting)
Published on

ಮಂಡ್ಯ: ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಸ್ಪರ್ಧೆಯನ್ನು ಜ.3 ರಿಂದ 5 ರೊಳಗಾಗಿ ಸಂಘಟಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಇನ್ನು ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾದವರು ರಾಜ್ಯಮಟ್ಟಕ್ಕೆ ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ ಕೆಲವರು ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂಬ ದೂರುಗಳು ಕೇಳಿಬರುತ್ತದೆ. ಇಂತಹ ಪ್ರಕರಣಗಳು ಕಂಡುಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿ.24ರಂದು ತಾಲೂಕು ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಿ ವಿಜೇತರ ಪಟ್ಟಿಯನ್ನು ಡಿ.26ರೊಳಗಾಗಿ ಪಡೆದುಕೊಳ್ಳಬೇಕು. ಇದರಿಂದ ಜನವರಿ ಪ್ರಾರಂಭದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಆಯೋಜಿಸಬಹುದು ಎಂದರು.

ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಕ್ರೀಡಾಕೂಟವನ್ನು ಪಿಇಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಕ್ರೀಡಾಂಗಣದಲ್ಲಿ ಬೇಕಿರುವ ಕುಡಿಯುವ ನೀರು, ವೈದ್ಯಕೀಯ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್‌ಗಳ ವ್ಯವಸ್ಥೆ, ಶಿಕ್ಷಣ ಇಲಾಖೆಯಿಂದ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಿಕೊಳ್ಳಿ. ಅಂತೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಕ್ರೀಡಾ ಕೂಟದಲ್ಲಿ ಭಾಗವಹಿಸುವವರಿಗೆ ಹಾಜರಾತಿ ಪತ್ರ ನೀಡಲಾಗುವುದು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕೆಲ ವಿಭಾಗಗಳಲ್ಲಿ ಸ್ಪರ್ಧಿಗಳೇ ಇರುವುದಿಲ್ಲ. ಕನಿಷ್ಟ 3 ಸ್ಪರ್ಧಿಗಳು ಇದ್ದರೆ ಮಾತ್ರ ಆ ವಿಭಾಗದಲ್ಲಿ ಸ್ಪರ್ಧೆ ನಡೆಸಿ ಒಂದು ಬಹುಮಾನ ನೀಡಿ. ಇಲ್ಲದಿದ್ದಾರೆ ಆ ವಿಭಾಗವನ್ನು ರದ್ದು ಮಾಡಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಗೌಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ತಮ್ಮಣ್ಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net