

ಮಂಡ್ಯ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಸಂಬಂಧ ಜಿಲ್ಲೆಯಲ್ಲಿ ಡಿ.15ರಿಂದ ನೋಂದಣಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ ಸಂಬಂಧ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ರಾಜ್ಯ ಸಹಕಾರ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದೆ. ಇದರ ಮೂಲಕವೇ ಖರೀದಿ ಪ್ರಕ್ರಿಯೆಯು ನಡೆಯುತ್ತದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ಡಿ.15ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಲಿದ್ದು, 2023ರ ಜ.1ರಿಂದ ಮಾ.31ರವರೆಗೆ ಭತ್ತ ಹಾಗೂ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಪ್ರತಿ ಎಕರೆಗೆ 25 ಕ್ವಿಂಟಾಲ್ನಂತೆ ಪ್ರತಿ ಬೆಳೆಗಾರರಿಂದ ಗರಿಷ್ಠ 40 ಕ್ವಿಂಟಾಲ್ ಭತ್ತ ಹಾಗೂ ರಾಗಿ ಪ್ರತಿ ಎಕರೆಗೆ ಕನಿಷ್ಠ 10 ರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿಸಲಾಗುವುದು. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ 2040 ರೂ, ಗ್ರೇಡ್ ಎ ಭತ್ತಕ್ಕೆ 2,060ರೂ ನಿಗದಿಪಡಿಸಲಾಗಿದೆ. ರಾಗಿ ಪ್ರತಿ ಕ್ವಿಂಟಾಲ್ಗೆ 3,578 ರೂ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ/ರಾಗಿ ಖರೀದಿ ಸಂಬಂಧಿಸಿದಂತೆ ಒಟ್ಟು 32 ನೋಂದಣಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.
ಬೇಡಿಕೆ ಇದ್ದಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಕೇಂದ್ರ ತೆರೆಯಬಹುದು. ಸೂಕ್ತ ದಾಸ್ತಾನಿಗಾಗಿ ಭತ್ತ ಖರೀದಿ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಭತ್ತದ ಗುಣಮಟ್ಟ ಪರೀಕ್ಷಿಸಲು ಗ್ರೇಡರ್‌ಗಳನ್ನು ನಿಯೋಜಿಸಬೇಕು. ಖರೀದಿಸಿದ ಭತ್ತವನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಬೇಕು ಎಂದು ಸೂಚಿಸಿದರು.
ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ರಾಗಿ ಮಾರಾಟ ಮಾಡುವ ರೈತರು ನೋಂದಣಿಗಾಗಿ ಫ್ರೂಟ್ ಐ.ಡಿ, ಆಧಾರ್‌ಸಂಖ್ಯೆಗೆ ಜೋಡಣೆಯಾದ ಬ್ಯಾಂಕ್ ಖಾತೆಯ ವಿವರ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು. ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತ ಹಾಗೂ ರಾಗಿಯ ಮೊತ್ತವನ್ನು ನೇರವಾಗಿ ಫಲಾನುಭವಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದರು.
ನೋಂದಣಿ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡಬೇಕು. ನೋಂದಣಿ ಕೇಂದ್ರಗಳು ಹಾಗೂ ಭತ್ತ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಕೆಎಫ್‌ಸಿಎಸ್‌ಸಿ ಬಸವರಾಜು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಎಂ.ಪಿ.ಕೃಷ್ಣಕುಮಾರ್, ತಹಸೀಲ್ದಾರ್‌ಗಳಾದ ಕುಂಞ ಅಹಮದ್, ರೂಪಾ, ಶ್ವೇತಾ ರವೀಂದ್ರ, ನಯನಾ, ನರಸಿಂಹಮೂರ್ತಿ ಇತರರಿದ್ದರು.