

ಉಡುಪಿ : ಸಾಮಾಜಿಕ ಭದ್ರತಾ ಯೋಜನೆಗಳೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅಸಂಘಟಿತ ಕಾರ್ಮಿಕರು ಇ-ಶ್ರಮ್ನಲ್ಲಿ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಮಿಕ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇವರೆಗೆ 1,85,791 ಜನ ನೋಂದಾಯಿಸಿದ್ದಾರೆ. ಉಳಿದವರು ಸಹ ನೋಂದಾಯಿಸಿಕೊಳ್ಳಬೇಕು. ಇ-ಶ್ರಮ್ ನಲ್ಲಿ ನೋಂದಾಯಿಸಲು ಕಾರ್ಮಿಕರು ಆಧಾರ್ ಕಾರ್ಡ್ನೊಂದಿಗೆ ಹೆಸರು, ವೃತ್ತಿ, ವಿಳಾಸ, ವಿದ್ಯಾರ್ಹತೆ, ಕೌಶಲ್ಯತೆಯ ವಿಧ, ಕುಟುಂಬದ ವಿವರ, ಬ್ಯಾಂಕ್ ಖಾತೆಯ ವಿವರ ಇತ್ಯಾದಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, 18- ರಿಂದ 40 ವರ್ಷದೊಳಗಿನ ಅಂಗಡಿ ಮಾಲಿಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಎಣ್ಣೆ ಗಿರಣಿ ಮಾಲೀಕರು, ವರ್ಕ್ ಶಾಪ್ ಮಾಲೀಕರು, ಕಮಿಷನ್ ಎಜೆಂಟ್ ಗಳು, ರಿಯಲ್ ಎಸ್ಟೇಟ್ ಬ್ರೋಕರ್ಗಳು, ಸಣ್ಣ ಹೋಟೆಲ್ ರೆಸ್ಟೋರೆಂಟ್ಗಳ ಮಾಲೀಕರು ಸೇರಿದಂತೆ ಇತರೆ ಸಣ್ಣ ವ್ಯಾಪಾರಗಳಲ್ಲಿ ತೊಡಗಿಕೊಂಡ ಸ್ವಯಂ ಉದ್ಯೋಗಿಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.
ಸಮಾಜದಲ್ಲಿನ ಅನಿಷ್ಠ ಪದ್ಧತಿಯಾದ ಬಾಲ ಕಾರ್ಮಿಕ ಪದ್ಧತಿಯನ್ನು ಜಿಲ್ಲೆಯಲ್ಲಿ ಹೋಗಲಾಡಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಮಲ್ಪೆ ಹಾಗೂ ಗಂಗೊಳ್ಳಿಯ ಬಂದರುಗಳಲ್ಲಿ ಮಕ್ಕಳು ಮೀನನ್ನು ಆಯುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಆಗಿದ್ದಾಂಗೆ ಅಧಿಕಾರಿಗಳು ಅನಿರೀಕ್ಷಿತ ದಾಳಿಗಳನ್ನು ಮಾಡಬೇಕು. ಬಾಲಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸೂಚನೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಇ-ಶ್ರಮ್ನಲ್ಲಿ ನೋಂದಾಯಿಸಲು ಇತರೆ ಇಲಾಖೆಗಳ ಸಹಯೋಗದೊಂದಿಗೆ ನೋಂದಣಿ ಶಿಬಿರಗಳನ್ನು ಏರ್ಪಡಿಸಿ, ಹೆಚ್ಚಿನ ನೋಂದಣಿ ಮಾಡಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್ , ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು.