

ತುಮಕೂರು : ಜಿಲ್ಲೆಯಲ್ಲಿ ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಶಿಕ್ಷಕರು ಕೆಲಸ ಮಾಡುವ ಸ್ಥಳದಲ್ಲಿಯೇ ಕರೊನಾ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ 45 ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕು ಎಂದು ಕೇಂದ್ರ ಸರ್ಕಾರದ ಸೂಚನೆಯನ್ನು ಎಲ್ಲರೂ ಪಾಲಿಸಬೇಕು ಎಂದರು.
ಪ್ರಥಮ ಆದ್ಯತೆಯಾಗಿ ಶಿಕ್ಷಕರಿಗೆ ಅವರ ಕಾರ್ಯ ಸ್ಥಳದಲ್ಲಿಯೇ ಕರೊನಾ ವ್ಯಾಕ್ಸಿನೇಷನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಾರ್ಯ ಸ್ಥಳದಲ್ಲಿ 100ಕ್ಕಿಂತ ಹೆಚ್ಚು ಫಲಾನುಭವಿಗಳಿದ್ದಲ್ಲಿ ಲಸಿಕೆ ನೀಡಲು ತಾತ್ಕಾಲಿಕವಾಗಿ ಲಸಿಕಾ ಉಪ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗುವುದು ಎಂದರು.
ಜನರೊಂದಿಗೆ ಒಡನಾಟ ಹೊಂದಿದ್ದು, ಲಸಿಕೆ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ ಈವರೆಗೂ ಲಸಿಕೆ ಪಡೆಯದವರಿಗೆ ಅರಿವು ಮೂಡಿಸಲು ಅನುಕೂಲವಾಗುತ್ತದೆ ಎನ್ನುವ ದೃಷ್ಟಿಯಿಂದ ಸರ್ಕಾರ 45 ವರ್ಷ ಮೇಲ್ಪಟ್ಟ ಶಿಕ್ಷಕರಿಗಾಗಿ ಈ ವಿಶೇಷ ವ್ಯವಸ್ಥೆ ಮಾಡಿದೆ. ಶಿಕ್ಷಕರು ತಮ್ಮೊಂದಿಗೆ 45 ವರ್ಷ ಮೇಲ್ಪಟ್ಟಿರುವ ತಮ್ಮ ಕುಟುಂಬ ಸದಸ್ಯರು ಹಾಗೂ ತಲಾ 10 ಮಂದಿ ಫಲಾನುಭವಿಗಳನ್ನು ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಕೊಡಿಸಬೇಕು ಎಂದರು.
ತಾತ್ಕಾಲಿಕ ಲಸಿಕಾ ಉಪಕೇಂದ್ರದಲ್ಲಿ ಕನಿಷ್ಟ 3 ಕೊಠಡಿ, 30 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀಡಿನ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ ಕಲ್ಪಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಡಿಸಿ ನಿರ್ದೇಶಿಸಿದರು, ಜಿಲ್ಲೆಯಲ್ಲಿ ಈಗಾಗಲೇ 2.09 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗಿರುವ ಬಗ್ಗೆ ವರದಿಯಾಗಿರುವುದಿಲ್ಲ. ಲಸಿಕೆ ಬಗ್ಗೆ ಯಾವುದೇ ಸುಳ್ಳುವದಂತಿಗಳಿಗೆ ಕಿವಿಗೊಡಬಾರದು. ಲಸಿಕೆ ಪಡೆದವರು ದಿನನಿತ್ಯ ಸೇವಿಸುವ ಆಹಾರ ಕ್ರಮ, ಔಷಧ ಮುಂದುವರಿಸಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದರು.
ಮದ್ಯವ್ಯಸನಿಗಳು ಲಸಿಕೆ ಪಡೆಯುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ, ಈ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬಹುದು. ಪೂರ್ವಾಗ್ರಹಪೀಡಿತರಾಗದೆ ನಿರಾತಂಕದಿಂದ ಲಸಿಕೆ ಪಡೆಯುವ ಬಗ್ಗೆ ಜನರಲ್ಲಿ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ಬಾಬು, ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನ್‌ದಾಸ್ ಇದ್ದರು.
45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕರೊನಾ ಲಸಿಕೆ ಪಡೆಯುವುದರಿಂದ ಹೆಚ್ಚು ಪ್ರಾಣಾಪಾಯ ತಪ್ಪಿಸಬಹುದು, ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೇ ಎಲ್ಲರೂ ಲಸಿಕೆ ಪಡೆಯಬಹುದು. ಏ.13ರಂದು ಯುಗಾದಿ ಮನೆ ಮಂದಿಯಷ್ಟೇ ಆಚರಣೆ ಮಾಡುವ ಮೂಲಕ ಕರೊನಾ ಹರಡುವುದನ್ನು ಹತೋಟಿ ಮಾಡಬಹುದು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ