

ತುಮಕೂರು: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 27 ತಾಯಿ ಮರಣ ಹಾಗೂ 113 ಶಿಶು ಮರಣ ಪ್ರಕರಣ ದಾಖಲಾಗಿವೆ ಎಂಬ ಆಘಾತಕಾರಿ ವಿಷಯವನ್ನು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತೆರೆದಿಟ್ಟರು.
ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಪ್ರಸವ ಸಂದರ್ಭದಲ್ಲಿ ಸಂಭವಿಸುವ ತಾಯಿ ಹಾಗೂ ಶಿಶು ಮರಣ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. 2021ರ ಜುಲೈ-ಅಕ್ಟೋಬರ್ ನಡುವೆ ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆಗಳಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಚಿ.ನಾ.ಹಳ್ಳಿ, ಮಧುಗಿರಿ, ತಿಪಟೂರು ಹಾಗೂ ತುಮಕೂರು ತಾಲೂಕಿನಲ್ಲಿ ತಲಾ 1, ಪಾವಗಡ 3, ತುರುವೇಕೆರೆ 2 ಸೇರಿ ಒಟ್ಟು 9 ತಾಯಂದಿರು ಸಾವನ್ನಪ್ಪಿರುತ್ತಾರೆ. ಮುಂದಿನ ದಿನಗಳಲ್ಲಿ ಈ ಮರಣ ಪ್ರಮಾಣ ನಿಯಂತ್ರಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಕರೊನಾ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನದಿಂದ ಜಿಲ್ಲೆಯಲ್ಲಿ ಮೊದಲನೇ ಡೋಸ್ ಲಸಿಕೆ ನೀಡುವಲ್ಲಿ ಶೇ.93 ಹಾಗೂ 2ನೇ ಡೋಸ್ ಲಸಿಕೆ ನೀಡುವಲ್ಲಿ ಶೇ.63 ಗುರಿ ಸಾಧಿಸಲಾಗಿದೆ. ಈ ತಿಂಗಳ ಎರಡನೇ ವಾರದದೊಳಗೆ ನಿಗದಿತ ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ ಇಲಾಖೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ, ಅದೇ ರೀತಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೊರೆ ಹೋಗುವ ಗರ್ಭಿಣಿ ಸ್ತ್ರೀಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ದೊರೆಯುವ ಉಚಿತ ಸೌಲಭ್ಯ ಕುರಿತ ಹಾಗೂ ಮಗುವಿನ ಆರೈಕೆ ಕುರಿತ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ನೀಡುವ ಮೂಲಕ ಮರಣ ಪ್ರಮಾಣ ನಿಯಂತ್ರಿಸಬೇಕು ಎಂದರು.
ಶಿಶು ಮರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಕಡಿಮೆ ತೂಕ, ಜಾಂಡೀಸ್, ಪೋಲಿಯೋ, ಟಿಬಿ, ಅವಧಿ ಮುನ್ನ ಜನನ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಂದ 113 ಶಿಶು ಮರಣ ಪ್ರಕರಣ ದಾಖಲಾಗಿವೆ. ಮುಂದಿನ ದಿನಗಳಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಿರುವ ತಾಲೂಕುಗಳಲ್ಲಿ ಆಸ್ಪತ್ರೆಗಳಿಗೆ ಬೇಕಾದ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದರು.
ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸಬೇಕು ಎಂದರಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಮಕ್ಕಳಲ್ಲಿ ತಂಬಾಕು ವ್ಯಸನದ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಿಮಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್ ದಾಸ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೇಶವ್‌ರಾಜ್ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಕರೊನಾ ಸಂಖ್ಯೆ ಹೆಚ್ಚಳ: ಜಿಲ್ಲೆಯಲ್ಲಿ ಶುಕ್ರವಾರ 30 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ತುಮಕೂರು ನಗರದಲ್ಲಿಯೇ 23 ಜನರಿಗೆ ಸೋಂಕು ತಗುಲಿದೆ. ಗುಬ್ಬಿ, ಕುಣಿಗಲ್ ತಲಾ 2, ಮಧುಗಿರಿ, ಶಿರಾ ಹಾಗೂ ತುರುವೇಕೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಪ್ರಸ್ತುತ ಜಿಲ್ಲೆಯಲ್ಲಿ 151 ಸಕ್ರಿಯ ಪ್ರಕರಣಗಳಿದ್ದು ಗುಣಮುಖರಾದ 6 ಜನರು ಆಸ್ಪತ್ರೆಯಿಂದ ಮನೆಗೆ ವಾಪಸಾಗಿದ್ದಾರೆ. ತುಮಕೂರಿನಲ್ಲಿ 70, ತುರುವೇಕೆರೆ 10, ಹೊರ ಜಿಲ್ಲೆಯ 15, ಗುಬ್ಬಿ 14, ಕುಣಿಗಲ್ 10, ಮಧುಗಿರಿ 12, ಚಿಕ್ಕನಾಯಕನಹಳ್ಳಿ 7, ಪಾವಗಡ, ಕೊರಟಗೆರೆ ತಲಾ 3, ತಿಪಟೂರು 2, ಶಿರಾ ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳಿವೆ.