ಕೆರೆಗಳ ಒತ್ತುವರಿ ತೆರವು ಮಾಡಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ

27TMK_Kere_Othuvari
Published on

ತುಮಕೂರು: ಜಿಲ್ಲೆಯಲ್ಲಿನ 2061 ಕೆರೆಗಳ ಪೈಕಿ ಬಾಕಿ ಉಳಿದಿರುವ 1542 ಕೆರೆಗಳ ಸರ್ವೇ ಕಾರ್ಯ ಶೀಘ್ರ ಪೂರ್ಣಗೊಳಿಸಿ ಒತ್ತುವರಿಯಾಗಿರುವ ಕೆರೆ ಗುರುತಿಸಿ, ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕೆರೆಗಳ ಒತ್ತುವರಿ ತೆರವು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 519 ಕೆರೆಗಳ ಸರ್ವೇ ಪೂರ್ಣಗೊಂಡಿದೆ. ಅದರಲ್ಲಿ 239 ಕೆರೆಗಳ ಒತ್ತುವರಿ ಮುಕ್ತವಾಗಿದ್ದು, ಒತ್ತುವರಿಯಾಗಿರುವ 280 ಕೆರೆ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆರೆಗಳನ್ನು ಶಾಶ್ವತ ಆಸ್ತಿಯನ್ನಾಗಿ ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರ ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ, ಜಿಲ್ಲೆಯ ಎಲ್ಲ ಕೆರೆಗಳ ಸರ್ವೇ ಕಾರ್ಯ ಕೈಗೊಂಡು ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು. ಕೆರೆಗಳ ಸುತ್ತ ಗಡಿ ಗುರುತಿಸಿ, ಅದರ ಸುತ್ತ ಇರುವ ಬಫರ್ ಝೋನ್ ಪ್ರದೇಶದಲ್ಲಿ ಯಾವುದೇ ಕಟ್ಟಡ ಅಥವಾ ಇತರ ಕಾಮಗಾರಿಗಳಿಗೆ ಅನುಮತಿ ನೀಡಬಾರದು ಎಂದರು.

ಕೂಡಲೇ ಸರ್ವೇ ನಡೆಸಿ ಒತ್ತುವರಿಯಾಗಿರುವ ಕೆರೆಗಳ ಮಾಹಿತಿ ನೀಡಬೇಕು, ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಳಿಕ ಹದ್ದುಬಸ್ತು ನಿಗದಿಪಡಿಸಿ, ಸುತ್ತಲೂ ಟ್ರಂಚಿಂಗ್ ತೆಗೆಯಬೇಕು. ಇಲ್ಲದಿದ್ದರೆ ಮತ್ತೆ ಒತ್ತುವರಿ ಮಾಡುವ ಸಾಧ್ಯತೆಗಳಿದೆ ಅದಕ್ಕೆ ಅವಕಾಶ ನೀಡಬಾರದು ಎಂದರು.

ಹದ್ದುಬಸ್ತು ಗುರುತಿಸಿ ಟ್ರಂಚಿಂಗ್ ತೆಗೆದ ಬಳಿಕ ಆ ಪ್ರದೇಶಗಳಲ್ಲಿ ತಕ್ಷಣವೇ ಗಿಡಗಳನ್ನು ನೆಡಬೇಕು ಎಂದು ಸಾಮಾಜಿಕ ಅರಣ್ಯ ಇಲಾಖಾಧಿಕಾರಿಗೆ ನಿರ್ದೇಶಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್, ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ಸಣ್ಣ ನೀರಾವರಿ ಇಲಾಖೆ ಇಇ ರವಿ ಸೂರನ್ ಇದ್ದರು.

ಜಿಲ್ಲೆಯಲ್ಲಿ ಬಾಕಿ ಇರುವ ಎಲ್ಲ ಕೆರೆಗಳ ಒತ್ತುವರಿ ತೆರವು ಕಾರ್ಯದ ಪ್ರಗತಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಒತ್ತುವರಿ ತೆರವಿನ ವೇಳೆ ಯಾರಾದರೂ ಅಡ್ಡಿ ಬಂದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ವೈ.ಎಸ್. ಪಾಟೀಲ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net