

ಚಿಕ್ಕಬಳ್ಳಾಪುರ: ಆರೋಗ್ಯ ನಂದನ ಅಭಿಯಾನದಡಿ ಜಿಲ್ಲೆಯ 18 ವರ್ಷದೊಳಗಿನ ಎಲ್ಲ ಮಕ್ಕಳ ಆರೋಗ್ಯ ತಪಾಸಣೆಗೆ ಜಿಲ್ಲಾಡಳಿತ ಸಜ್ಜಾಗುತ್ತಿದೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಆರೋಗ್ಯ ನಂದನ ಅಭಿಯಾನ ಹಾಗೂ ಜಿಲ್ಲಾ ಜನನಮರಣ ನೋಂದಣಿ ಕುರಿತ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ, ಮುಂದಿನ 2 ವಾರಗಳಲ್ಲಿ ಎಲ್ಲ ಇಲಾಖೆಗಳು ಅಭಿಯಾನ ಯಶಸ್ವಿಗೆ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.
ಸಂಭಾವ್ಯ ಕರೊನಾ ಮೂರನೇ ಅಲೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೂ ನಿಯಂತ್ರಣ ಕ್ರಮಗಳನ್ನು ಹಿಂದಿನಂತೆಯೇ ಅನುಸರಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಗಣನೀಯ ಪ್ರವಾಣದಲ್ಲಿ ಸೋಂಕಿನ ಪ್ರವಾಣ ತಗ್ಗಿದ್ದು, ಇದನ್ನು ಶೂನ್ಯಕ್ಕೆ ತರಬೇಕಿದೆ ಎಂದರು.
ಮಕ್ಕಳ ಲಸಿಕಾಕರಣ ನಡೆಯದ ಕಾರಣ ಮಕ್ಕಳ ಆರೋಗ್ಯ ಸುಧಾರಣೆಗೆ ವಿಶೇಷ ಕಾಳಜಿ ವಹಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ನಂದನ ಅಭಿಯಾನ ಜಾರಿಗೆ ತರಲಾಗಿದೆ. ಇದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ ಎಂದರು.
ಪ್ರತಿ ತಾಲೂಕಿನಲ್ಲಿ ವೈದ್ಯರು, ದಾದಿಯರನ್ನೊಳಗೊಂಡ ತಲಾ 2 ಆರ್‌ಬಿಎಸ್‌ಕೆ ಮೊಬೈಲ್ ತಂಡಗಳಂತೆ 12 ತಂಡಗಳನ್ನು ರಚಿಸಿಕೊಂಡು ಪ್ರತಿ ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಾಲಾ-ಕಾಲೇಜುಗಳಲ್ಲಿ ಶಿಬಿರಗಳನ್ನು ಏರ್ಪಡಿಸಬೇಕು. 18 ವರ್ಷದೊಳಗಿನ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ವಾಡಬೇಕು. ಇದೇ ವೇಳೆ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಶಿಬಿರಕ್ಕೆ ಕರೆ ತರಬೇಕು ಎಂದರು.
ಮೊದಲು ತೀವ್ರತರದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪೌಷ್ಟಿಕ ಪುನಶ್ಚೇತನ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಇದೇ ವೇಳೆ ರೋಗ ಲಕ್ಷಣಗಳಿರುವ ಮಕ್ಕಳಿಗೆ ಕರೊನಾ ಪರೀಕ್ಷೆ ವಾಡಬೇಕು ಆರೋಗ್ಯ ತಪಾಸಣಾ ವರದಿಯನ್ನು ಕಡ್ಡಾಯವಾಗಿ ಸ್ವಾಸ್ಥ್ಯ ಕಿರಣ ತಂತ್ರಾಂಶದಲ್ಲಿ ನಮೂದಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ ಮತ್ತಿತರರು ಇದ್ದರು.
ಟಾಸ್ಕ್ ಪೋರ್ಸ್: ಸಭೆಯಲ್ಲಿ ಆರೋಗ್ಯ ನಂದನ ಅಭಿಯಾನದಡಿ ಶಿಬಿರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿ ಮತ್ತು ಕರೊನಾ ನಿಯಂತ್ರಣ ಟಾಸ್ಕ್ ಪೋರ್ಸ್‌ಗಳ ಪರಸ್ಪರ ಸಮನ್ವಯತೆ ಸಾಧಿಸುವುದರ ಬಗ್ಗೆ ಚರ್ಚಿಸಲಾಯಿತು. ಕರೊನಾ ಸಾವು ಹಾಗೂ ಜಿಲ್ಲಾ ಜನನ ಮರಣ ನೋಂದಣಿ, ಲಸಿಕೆಯ ವಾಹಿತಿಯುಳ್ಳ ಕಿರುಹೊತ್ತಗೆ ಬಿಡುಗಡೆಗೊಳಿಸಲಾಯಿತು.