ಅನುದಾನ ಸರ್ಮಪಕವಾಗಿ ಬಳಸಿ ; ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಸೂಚನೆ

18CBP3DCMeeting
Published on

ಚಿಕ್ಕಬಳ್ಳಾಪುರ: ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನ ಸಂಪೂರ್ಣ ಹಾಗೂ ಸಮರ್ಪಕ ಬಳಕೆಗೆ ಸೂಚಿಸಿರುವ ಜಿಲ್ಲಾಧಿಕಾರಿ ಆರ್.ಲತಾ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಅನುದಾನವನ್ನು ಆಯಾ ಕ್ರಿಯಾಯೋಜನೆಯ ಉದ್ದೇಶಗಳಿಗೆ ಮಾತ್ರವೇ ಬಳಸುವಂತೆ ತಾಕೀತು ಮಾಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಿದ ಅವರು, ಕಾಮಗಾರಿಗಳನ್ನು ಕಡ್ಡಾಯವಾಗಿ ನಿಗದಿತ ಪರಿಶಿಷ್ಟರ ಕಾಲನಿಗಳಲ್ಲಿ ಮಾತ್ರವೇ ಕೈಗೊಳ್ಳಬೇಕು ಹೊರತು ಬೇರೆ ಕಡೆ ನಡೆಸದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಅಂಬೇಡ್ಕರ್ ಅಭಿವೃದ್ಧಿ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ, ಕರ್ನಾಟಕ ಭೋವಿ ಅಭಿವೃದ್ಧಿ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಗಳಡಿ ವಿವಿಧ ಸಾಲ, ಸೌಲಭ್ಯಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗಲಿದೆ. ಜತೆಗೆ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನದ ಖರ್ಚಿನಲ್ಲಿ ನೂರರಷ್ಟು ಸಾಧನೆ ತೋರಲು ಹಿರಿಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು.

ಗಂಗಾಕಲ್ಯಾಣ ಯೋಜನೆಯಡಿ ಬಾಕಿ ಇರುವ ಕೊಳವೆಬಾವಿಗಳನ್ನು ಕೊರೆಸಲು ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಈಗಾಗಲೇ ಕೊರೆದಿರುವ ಬೋರ್‌ವೆಲ್‌ಗಳಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಕೆಲ ನಿಗಮಗಳಲ್ಲಿ ಎರಡ್ಮೂರು ವರ್ಷಗಳ ಹಿಂದಿನ ಫಲಾನುಭವಿಗಳ ಆಯ್ಕೆ ಪಟ್ಟಿ ಇಂದಿಗೂ ಅಂತಿಮ ಆಗಿಲ್ಲ. ಸಂಬಂಧಪಟ್ಟ ಶಾಸಕರಿಂದ ಅನುಮೋದನೆ ಪಡೆಯುವಂತೆ ನಿರ್ದೇಶಿಸಿದರು.

ವಿದ್ಯಾರ್ಥಿ ನಿಲಯಗಳ ಸಿದ್ಧತೆ: ಆ.23 ರಿಂದ ಶಾಲಾ-ಕಾಲೇಜುಗಳಲ್ಲಿ 9 ರಿಂದ 12 ನೇ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಗಳ ಸಿದ್ಧತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಶಾಲೆಯ ಕೊಠಡಿಗಳು, ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆ ಕೈಗೊಳ್ಳುವುದು, ಕರೊನಾ ಸೋಂಕಿನ ಸಂಭಾವ್ಯ ಮೂರನೇ ಅಲೆಯ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ವಸತಿ ಶಾಲೆಗಳನ್ನು ಮೀಸಲಿರಿಸುವಿಕೆ, ಸತ್ಯಸಾಯಿ ಟ್ರಸ್ಟ್‌ನ ಸಾಯಿಶೂರ್ ಪೌಷ್ಟಿಕ ಹಾಲಿನ ಪೌಡರ್ ಅನ್ನು ವಿದ್ಯಾರ್ಥಿಗಳಿಗೆ ಸಮರ್ಪಕ ವಿತರಣೆಗೆ ಸೂಚಿಸಲಾಯಿತು.

ಪೌಷ್ಟಿಕ ಹಾಲಿನ ಪೌಡರ್ ಬೇಡಿಕೆ, ವಿತರಣೆಯ ಕುರಿತ ವರದಿ ಸಲ್ಲಿಸಲು ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಎಲ್ಲ ಮಕ್ಕಳಿಗೂ ಆಹಾರ ಧಾನ್ಯ ವಿತರಣೆಗೆ ಅಕ್ಷರ ದಾಸೋಹ ಇಲಾಖೆಗೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.

ಅಧಿಕಾರಿಗಳಿಗೆ ನೋಟೀಸ್: ಸಮರ್ಪಕ ಮಾಹಿತಿ ನೀಡದ ಜವಳಿ ಇಲಾಖೆ, ರೇಷ್ಮ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಧಿನಿಯಮದಡಿ ನೋಟಿಸ್ ನೀಡಲು ಆರ್.ಲತಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

16.10 ಕೋಟಿ ರೂ. ಅನುದಾನ ಮಂಜೂರು: 2021-22ನೇ ಸಾಲಿನ ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳಡಿ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ಕಾರ್ಯನಿರ್ವಾಹಕ ಸಿಬ್ಬಂದಿಗೆ ವೇತನ, ವಿದ್ಯಾರ್ಥಿಗಳಿಗೆ ನಿವಾಸಿ ಶಾಲೆಗಳು, ಕಾಲೇಜು ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಹಾಯಧನಕ್ಕೆ ಸೇರಿ ವಿವಿಧ ಯೋಜನೆಗೆ 16.10 ಕೋಟಿ ಅನುದಾನ ಮಂಜೂರಾಗಿದ್ದು ಶೇ.30.88 ಸಾಧನೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net