ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ ಖರೀದಿಗೆ ದರ ನಿಗದಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.

23GDG04
Published on

ಗದಗ: ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ  ರೈತರಿಂದ  ಬಿಳಿ ಜೋಳ ಹಾಗೂ ರಾಗಿ  ಖರೀದಿಸಲು ದರ ನಿಗದಿಪಡಿಸಲಾಗಿದ್ದು,    ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಗಳನ್ವಯ ಬಿಳಿ ಜೋಳದ  ಉತ್ಪನ್ನವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದಿಂದ ನೇಮಿಸಲ್ಪಟ್ಟ  ಸಂಗ್ರಹಣಾ ಏಜೆನ್ಸಿಗಳು  ಜೋಳ   ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು ಹಾಗೂ ಜನೆವರಿ 1 ರಿಂದ ಮಾರ್ಚ 31 ರ ಅವಧಿಯಲ್ಲಿ ಖರೀದಿ ಪ್ರಕ್ರಿಯೆ ಜರುಗಿಸಬೇಕು. ಡಿಸೆಂಬರ್ 1 ರಿಂದ ನೊಂದಣಿ ಕಾರ್ಯ ಕೈಗೊಳ್ಳಬೇಕು.  ರೈತರಿಂದ   ಖರೀದಿಸಲು  ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ ವತಿಯಿಂದ ಗ್ರೇಡರ್‍ಗಳನ್ನು ನೇಮಿಸಬೇಕು.  ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‍ನಂತೆ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ಬಿಳಿ ಜೋಳವನ್ನು ಖರೀದಿಸಬೇಕು.  ಸರ್ಕಾರವು ನಿಗದಿಪಡಿಸಿದ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ಬಿಳಿ ಜೋಳವನ್ನು ಖರೀದಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಎಂ. ಅವರು ಮಾತನಾಡಿ 2023-2024 ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬಿಳಿ ಜೋಳ-ಹೈಬ್ರೀಡ್ ಪ್ರತಿ ಕ್ವಿಂಟಾಲ್‍ಗೆ  ರೂ.3180,   ಬಿಳಿ ಜೋಳ-ಮಾಲ್ದಂಡಿ ರೂ. 3225/- ರೂ. ನಿಗದಿಪಡಿಸಲಾಗಿದೆ. ಗದಗ ಜಿಲ್ಲೆಯಲ್ಲಿ 2 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ಗದಗ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಹಾಗೂ  ರೋಣದ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಪ್ರಕ್ರಿಯೆ ಜರುಗಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.  

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಎಪಿಎಂಸಿಯ ಸಿ ಎ ಹೂಗಾರ, ಟಾಸ್ಕ್‍ಫೋರ್ಸ ಸಮಿತಿ ಸದಸ್ಯರು ಹಾಜರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net