ಮಲೇರಿಯಾಮುಕ್ತ ಜಿಲ್ಲೆಯಾಗಿಸುವ ಗುರಿ ಮುಟ್ಟಿ

dc meeting
Published on

ಜಿಲ್ಲಾಧಿಕಾರಿ ಆರ್.ಲತಾ ಸೂಚನೆ

ಡಿಸಿ ಕಚೇರಿಯಲ್ಲಿ ಅಂತರ್ ಇಲಾಖಾ ಸಮನ್ವಯ ಸಭೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯನ್ನು 2025ರ ವೇಳೆಗೆ ಮಲೇರಿಯಾಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲ ಇಲಾಖೆಗಳು ಸಮನ್ವಯ ಸಾಧಿಸಿ ಗುರಿ ಮುಟ್ಟುವಲ್ಲಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಕರೆ ನೀಡಿದರು.
ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಹಾಗೂ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಮಾತನಾಡಿದರು.
ತಾಲೂಕು ಕೇಂದ್ರಗಳಲ್ಲಿ ರಕ್ತ ಲೇಪನ ಸಂಗ್ರಹ ಕಾರ್ಯ ಚುರುಕುಗೊಳಿಸಿದರೆ, ಮಲೇರಿಯಾ, ಡೆಂಘೆ, ಚುಕೂನ್ ಗುನ್ಯಾ ಜ್ವರದಂತಹ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ, ಶೀಘ್ರ ಚಿಕಿತ್ಸೆ ದೊರಕಿಸಿಕೊಡಬಹುದು. ಆದ್ದರಿಂದ ಈ ಎಲ್ಲ ಜ್ವರ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ರಕ್ತ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ತಲುಪಿಸಿ, ರೋಗ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಕಲ್ಲು ಗಣಿಗಾರಿಕೆಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಹೊರ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರಿಗೆ ಕಡ್ಡಾಯ ರಕ್ತ ಮಾದರಿ ಸಂಗ್ರಹಿಸಿ, ದೃಢಪಟ್ಟ ಪ್ರಕರಣಗಳಿಗೆ ವೈದ್ಯಾಧಿಕಾರಿಗಳು ತ್ವರಿತ ಚಿಕಿತ್ಸೆ ನೀಡುವತ್ತ ಗಮನ ನೀಡಬೇಕು ಎಂದು ಸೂಚಿಸಿದರು. ಸೊಳ್ಳೆ ಉತ್ಪತ್ತಿ ತಾಣಗಳಾದ ತೆರೆದ ತೊಟ್ಟಿ, ಮೇಲ್ಚಾವಣಿ ಇಲ್ಲದ ತೊಟ್ಟಿಗಳು. ಕಿರು ನೀರು ಸರಬರಾಜು ತೊಟ್ಟಿಗಳನ್ನು ಭದ್ರವಾದ ಮುಚ್ಚಳ ಅಥವಾ ಬಟ್ಟೆಯಿಂದ ಮುಚ್ಚಬೇಕು. ಶಾಲೆ ಅಂಗನವಾಡಿ ಕೇಂದ್ರಗಳಲ್ಲಿ ತೆರೆದ ತೊಟ್ಟಿಗಳಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಅವುಗಳ ಮೇಲ್ಭಾಗವನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದರು.
ಜನಜಾಗೃತಿ ಮೂಡಿಸಬೇಕು: ಆರೋಗ್ಯ ಇಲಾಖೆ ಪೋಸ್ಟರ್, ಬ್ಯಾನರ್, ಮಾಹಿತಿ- ಶಿಕ್ಷಣ-ಸಂವಹನ ಚಟುವಟಿಕೆಗಳ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಚ್ಚರಿಕೆ ಹಾಗೂ ಜನಜಾಗೃತಿ ಮೂಡಿಸಬೇಕು ಎಂದರು. ಮಲೇರಿಯಾ ಹಾಗೂ ಡೆಂಘೆ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳನ್ನು ಇದೇ ವೇಳೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಧರ್ಮೇಂದ್ರ ವಿವರಿಸಿದರು.
ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು: ಕುಡಿಯುವ ನೀರು ಸರಬರಾಜು ಮಾಡುವ ಮೊದಲು ಸೂಕ್ತ ಪ್ರಮಾಣದಲ್ಲಿ ಕ್ಲೋರಿನೇಷನ್ ಮಾಡುವುದು, ಗುಂಡಿಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೊಳವೆಬಾವಿಗಳಿಂದ ಅಥವಾ ಸಾರ್ವಜನಿಕ ನಲ್ಲಿಗಳಲ್ಲಿ ನೀರು ಸೋರಿಕೆಯಾಗುತ್ತಿದ್ದಲ್ಲಿ ದುರಸ್ತಿಗೊಳಿಸಿ ಸರಬರಾಜು ಮಾಡುವುದು, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವುದು, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮ-ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳು, ನೀರು ಶೇಖರಣೆಗೊಳ್ಳುವ ಇತರ ಅನುಪಯುಕ್ತ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಅಧಿಕಾರಿಗಳಿಂದ ಮಾಹಿತಿ: ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸೊಳ್ಳೆ ನಾಶಕ ದ್ರಾವಣ ಸಿಂಪಡಿಸುವುದು,
ಸರ್ಕಾರಿ ಖಾಸಗಿ ಕಟ್ಟಡ ಕಾಮಗಾರಿಗಳಲ್ಲಿ ತೊಡಗುವ ವಲಸೆ ಕಾರ್ಮಿಕರನ್ನು ತಪಾಸಣೆ ಮಾಡುವುದು, ವಸತಿ ನಿಲಯಗಳ, ಸಮುಚ್ಚಯಗಳ ಒಳಾಂಗಣ ಹೊರಾಂಗಣಗಳಲ್ಲಿ ಶುಚಿತ್ವ ಕಾಪಾಡುವುದು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ಸಾಂಕ್ರಾಮಿಕ ರೋಗಗಳ ಕುರಿತ ಜಾಗೃತಿ ಮೂಡಿಸುವುದು ಸೇರಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ರೋಗ ನಿಯಂತ್ರಣಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಆರ್.ಲತಾ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net