ತಂಬಾಕಿನಿಂದ ಹದಗೆಡಲಿದೆ ಆರೋಗ್ಯ

dc meeting devnhalli
Published on

ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಎಚ್ಚರಿಕೆ

ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಚನೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಶಾಲಾ-ಕಾಲೇಜು, ಆಸ್ಪತ್ರೆ, ಅಂಗಡಿ ಮುಂಗಟ್ಟು, ಕೈಗಾರಿಕೆ ಸೇರಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರ, ನಾಮಫಲಕ ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚಿಸಿದರು.
ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾನೂನು ಕೊಟ್ಪಾ 2003ರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಅಂಗಡಿಗಳಲ್ಲಿ ಕೈಗಾರಿಕೆಗಳಲ್ಲಿ ತಂಬಾಕು ಸೇವನೆ ನಿಷೇಧ ಬಗೆಗಿನ ನಾಮಫಲಕ ಪ್ರದರ್ಶಿಸಿರುವ ಬಗ್ಗೆ ಪರಿಶೀಲಿಸಿ, ನಿಯಮ ಉಲ್ಲಂಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು
ಪ್ರಾಯೋಜಕತ್ವ ನಿಷೇಧ: ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ, ಇದರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಮಾಲೀಕರು ನಾಮಫಲಕ ಪ್ರದರ್ಶಿಸಬೇಕು. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನ, ಪ್ರಾಯೋಜಕತ್ವ ನಿಷೇಧ ಮಾಡಲಾಗಿದೆ. ಹಾಗೆಯೇ, ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ಜಾಹೀರಾತು ಮೂಲಕ ಪ್ರಚಾರ ಮಾಡುವಂತಿಲ್ಲ ಎಂದು ಡಿಸಿ ತಿಳಿಸಿದರು.
ಶಿಕ್ಷಾರ್ಹ ಅಪರಾಧ: ತಂಬಾಕು ಉತ್ಪನ್ನಗಳನ್ನು 18 ವರ್ಷದೊಳಗಿರುವವರಿಗೆ ಮಾರಾಟ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಜತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಸಂಸ್ಥೆಗಳ ನಿಗದಿತ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ಶೇ. 85 ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವಂತಿಲ್ಲ ಎಂದು ಡಿಸಿ ಹೇಳಿದರು.
ತಂಬಾಕು ವ್ಯಸನಿಗಳನ್ನು ಪತ್ತೆ ಮಾಡಿ ಸಮಾಲೋಚನೆ ನಡೆಸಿ, ತಂಬಾಕು ವ್ಯಸನಮುಕ್ತರನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿ, ಕಾನೂನು ಪಾಲಿಸದೆ ತಂಬಾಕು ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ, ಎಚ್ಚರಿಕೆ ನೀಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಲಸಿಕಾಕರಣಕ್ಕೆ ಪ್ರಚಾರ ನೀಡಿ: 2023ರ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದ ಅಂಗವಾಗಿ 5 ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕಾಕರಣ ಕ್ಯಾಂಪ್ ಮಾಡುವ ಮುನ್ನಾ ಹೆಚ್ಚು ಪ್ರಚಾರ ಮಾಡಿ, ಪ್ರತಿ ಮಗುವಿಗೂ ಲಸಿಕೆ ದೊರಕುವಂತೆ ಕಾರ್ಯಕ್ರಮ ರೂಪಿಸಬೇಕು. ಇದುವರೆಗೂ ಲಸಿಕೆ ಪಡೆಯದ, ಲಸಿಕೆ ಪಡೆಯಲು ಬಾಕಿ ಇರುವ ಪ್ರದೇಶ, ವಲಸೆ ಪ್ರದೇಶಗಳಲ್ಲಿ, ನಗರದ ಸ್ಲಂ ಪ್ರದೇಶದಲ್ಲಿ ಹೆಚ್ಚು ಗಮನ ಹರಿಸಿ ಹೆಚ್ಚು ಲಸಿಕಾಕರಣ ಮಾಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net