ಜಲ ಸಂಪನ್ಮೂಲಗಳ ಸ್ಥಿತಿಗತಿ ಸಮಗ್ರ ವರದಿ ನೀಡಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ಸೂಚನೆ

11CBP3DCMeeting
Published on

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಜಲ ಸಂಪನ್ಮೂಲಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸಮಗ್ರ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಕೆರೆಗಳು ಮತ್ತು ಕಲ್ಯಾಣಿಗಳ ಅಭಿವೃದ್ಧಿ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ವೈಫಲ್ಯ ಹೊಂದಿರುವ ಜಿಲ್ಲೆಯಲ್ಲಿನ ಕೆರೆ, ಕುಂಟೆ, ಕಲ್ಯಾಣಿಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಿರೀಕ್ಷೆಯ ಕೆಲಸ ಮತ್ತು ಯೋಜನಾ ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾಡಳಿತವು ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿ ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಶ್ರಮದಾನ ಹಾಗೂ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಜಲಮೂಲಗಳ ಸಂರಕ್ಷಣೆಗೆ ಮುಂದಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 15 ಕಲ್ಯಾಣಿಗಳು ಇದ್ದು, ಈಗಾಗಲೇ 3 ಕಲ್ಯಾಣಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ 12 ಕಲ್ಯಾಣಿಗಳ ಜೀರ್ಣೋದ್ಧಾರ ಕಾರ್ಯ ಅಗತ್ಯವಿದೆ ಎಂದು ಪೌರಾಯುಕ್ತ ಲೋಹಿತ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಡಿಎಂಎ್ಟಿ ಮತ್ತು ವಿಶೇಷ ಅನುದಾನದ ಮೂಲಕ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಕೂಡ ಲಭ್ಯವಿರುವ ಅನುದಾನದ ಜತೆಗೆ ಸ್ಥಳೀಯ ದಾನಿಗಳ ನೆರವಿನಿಂದ ಕಲ್ಯಾಣಿ, ಚೆಕ್ ಡ್ಯಾಂಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆಯ ಜತೆಗೆ ಅರಣ್ಯೀಕರಣಕ್ಕೂ ವಿಶೇಷ ಒತ್ತು ನೀಡಬೇಕಾಗಿದೆ. ಇದಕ್ಕೆ ಅರಣ್ಯ ಇಲಾಖೆಯು ಪ್ರಮುಖ ಧಾರ್ಮಿಕ ಸ್ಥಳಗಳು ಒಳಗೊಂಡಂತೆ ಸೂಕ್ತ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಬೇಕು. ಮರಗಳನ್ನು ಕಡಿಯುವುದಕ್ಕೆ ಕಡಿವಾಣ ಹಾಕುವುದರ ಜತೆಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಇದಕ್ಕೆ ವಿವಿಧ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ನೆರವನ್ನು ಪಡೆಯಬೇಕು ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಅಧಿಕಾರಿ ವಿಜಯಲಕ್ಷ್ಮೀ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿ ನಂಜುಂಡಸ್ವಾಮಿ ಮತ್ತಿತರರು ಇದ್ದರು.

ಡಿಪಿಆರ್ ತಯಾರಿಸಿ : ಜಿಲ್ಲೆಯ ಪ್ರವಾಸಿ ಮತ್ತು ಧಾರ್ಮಿಕ ತಾಣಗಳಲ್ಲಿ ರಂಗಸ್ಥಳ ಪ್ರಮುಖವಾದುದು. ಇಲ್ಲಿಗೆ ವಿವಿಧ ಕಡೆಯಿಂದ ನೂರಾರು ಮಂದಿ ಭಕ್ತರು ಪ್ರತಿನಿತ್ಯ ಬಂದು ಹೋಗುತ್ತಿರುತ್ತಾರೆ. ಮತ್ತಷ್ಟು ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಉತ್ತಮ ಪ್ರವಾಸಿ ತಾಣವಾಗಿ ಮತ್ತಷ್ಟು ಅಭಿವೃದ್ಧಿಪಡಿಸಬೇಕಾಗಿದೆ. ಇಲ್ಲಿನ 3 ಕಲ್ಯಾಣಿಗಳ ಜೀರ್ಣೋದ್ಧಾರ, ಉದ್ಯಾನ, ಶೌಚಗೃಹ ಮತ್ತು ಸ್ನಾನದ ಗೃಹಗಳ ನಿರ್ಮಾಣ ಸೇರಿ ಇತರೆ ಅಭಿವೃದ್ಧಿ ಕೆಲಸಗಳಿಗೆ ಎಷ್ಟು ಅನುದಾನ ಅಗತ್ಯವಿದೆ ಎಂಬುದರ ಸವಿವರ ಯೋಜನಾ ವರದಿಯನ್ನು ಎರಡ್ಮೂರು ದಿನದೊಳಗೆ ಸಲ್ಲಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net