

ಮಂಡ್ಯ: ಜಿಲ್ಲೆಯಲ್ಲಿ 23 ಸಾವಿರ ಸಾಕುನಾಯಿ, 56 ಸಾವಿರ ಬೀದಿ ನಾಯಿಗಳಿವೆ. ಪ್ರಮುಖವಾಗಿ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೀದಿನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀದಿನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳು ಮುತುವರ್ಜಿ ವಹಿಸಿ, ಮಾನವೀಯತೆ ರೀತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಬೇಕು ಎಂದರು.
ಬೀದಿನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಒಂದು ನಾಯಿಗೆ 1,500 ರೂ. ವೆಚ್ಚ ತಗಲುತ್ತದೆ. ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು ಇದಕ್ಕಾಗಿ ಅನುದಾನವನ್ನು ಕ್ರೋಡೀಕರಣ ಮಾಡಿಕೊಳ್ಳಬೇಕು. ಸಂತಾನ ನಿಯಂತ್ರಣ ಅನುಷ್ಠಾನ ಮಾಡುವ ಜತೆಗೆ ಮುಖ್ಯವಾಗಿ ರೇಬಿಸ್ ನಿಯಂತ್ರಣ ಲಸಿಕೆಯನ್ನೂ ಮಾಡಬೇಕು ಎಂದು ಸೂಚಿಸಿದರು.
ಪಶುಪಾಲನೆ ಇಲಾಖೆ, ಸ್ಥಳೀಯ ಸಂಸ್ಥೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಿ ಬೀದಿ ನಾಯಿ ಸಂತಾನ ನಿಯಂತ್ರಣ ಮಾಡಬೇಕು. ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗಾಗಿ ಕೇಂದ್ರದ ಅವಶ್ಯಕತೆ ಇದೆ. ಹಾಗಾಗಿ ಜಿಲ್ಲೆಯ ಸುತ್ತಮುತ್ತ ಅರ್ಧ ಎಕರೆ ಸ್ಥಳವನ್ನು ಗುರುತಿಸಿ ಕೇಂದ್ರ ಸ್ಥಾಪಿಸುವುದಕ್ಕೆ ಚಿಂತಿಸಲಾಗುತ್ತಿದೆ. ಪ್ರಮುಖವಾಗಿ ಮಾನವೀಯ ರೀತಿಯಲ್ಲಿ ನಾಯಿಯನ್ನು ಹಿಡಿದು ಸಂತಾನ ನಿಯಂತ್ರಣ ಮಾಡಬೇಕು ಎಂದರು.
ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಲ್ಲೆಲ್ಲಿ ಹೆಚ್ಚು ಬೀದಿ ನಾಯಿಗಳ ಹಾವಳಿ ಇದೆಯೋ ಅಂತಹ ಪ್ರದೇಶಗಳನ್ನು ಗುರುತಿಸಿ, ಆದ್ಯತೆ ಮೇರೆಗೆ ಅಲ್ಲಿ ಸಂತಾನ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 23,721 ಜನರಿಗೆ ನಾಯಿಗಳು ಕಚ್ಚಿದೆ. ಅವರಿಗೆಲ್ಲ ಚಿಕಿತ್ಸೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಪಶುಪಾಲನಾ ವೈದ್ಯಾಧಿಕಾರಿ ಡಾ.ಸುರೇಶ್, ನಗರಸಭೆ ಆಯುಕ್ತ ಮಂಜುನಾಥ್ ಮತ್ತಿತರರಿದ್ದರು.