ಕರೊನಾ ಲಸಿಕೆ ಶೇ.100 ಗುರಿ ಸಾಧಿಸಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಾಕೀತು

10Tmk_DC_Meeting
Published on

ತುಮಕೂರು : ಕರೊನಾ ಸಂಭಾವ್ಯ 3ನೇ ಅಲೆ ಹಿನ್ನೆಲೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ನೀಡಲು ಯಾವುದೇ ವಿಳಂಬ ಮಾಡದೇ ಶೇ.100 ಲಸಿಕಾಕರಣ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ ಕರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 200ರ ಗಡಿ ದಾಟಿದೆ. ಈ ಸಂದರ್ಭದಲ್ಲಿ ಯಾವುದೇ ಸಬೂಬು ಹೇಳದೆ ಲಸಿಕೆ ನೀಡಬೇಕು. ಎರಡನೇ ಡೋಸ್ ಲಸಿಕಾಕರಣ ಶೇ.80 ಆಗಿದೆ. ಜನರಲ್ಲಿ ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಿ ಶೀಘ್ರ ಶೇ.100 ಗುರಿ ಸಾಧಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕರೊನಾ ಹಾಗೂ ಒಮಿಕ್ರಾನ್ ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಹಾಸ್ಟೆಲ್‌ಗಳಲ್ಲಿ ಪಾಸಿಟಿವ್ ಪ್ರಕರಣ ವರದಿಯಾದಲ್ಲಿ ಸೋಂಕಿತ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಬೇಕು. ಪ್ರತಿದಿನ 2 ಬಾರಿಯಂತೆ ವೈದ್ಯರು ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ, ಎಡಿಸಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಡಾ.ಮೋಹನ್‌ದಾಸ್, ಡಾ.ಸನತ್, ಡಾ.ಕೇಶವರಾಜ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರಮೇಶ್, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

7 ದಿನ ಶಾಲೆಗಳಿಗೆ ರಜೆ : ಶಾಲೆಗಳಲ್ಲಿ ಕರೊನಾ ಪ್ರಕರಣ ಕಂಡುಬಂದ ಕೂಡಲೇ ಶಾಲೆಯ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕು. ಪ್ರಕರಣ ವರದಿಯಾದ ದಿನದಿಂದ 7 ದಿನಗಳ ಕಾಲ ರಜೆ ಘೋಷಣೆ ಮಾಡಬೇಕು. ಕರೊನಾ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ನಡೆಸಬೇಕು ಹಾಗೂ ಪರೀಕ್ಷೆ ನಡೆಸಿರುವ ಕುರಿತು 2 ದಿನಗಳೊಳಗೆ ವರದಿ ನೀಡಬೇಕು ಎಂದು ವೈ.ಎಸ್.ಪಾಟೀಲ ತಿಳಿಸಿದರು.

ಪರಿಹಾರ ಪೋರ್ಟಲ್ ಅಪ್ಡೇಟ್ ಇರಲಿ: ಜಿಲ್ಲೆಯಲ್ಲಿ ಅತಿವೃಷ್ಟಿ ಸಂಬಂಧ ಪರಿಹಾರ ಪೋರ್ಟಲ್ ಎಂಟ್ರಿಗಳು, ಭೂಮಿ ಪೆಂಡೆನ್ಸಿ, ಪೈಕಿ ಪಹಣಿ ಒಗ್ಗೂಡಿಸುವಿಕೆ, ಪಹಣಿ ಕಲಂ 3/9 ಮಿಸ್ ಮ್ಯಾಚ್, ಆಧಾರ್ ಸೀಡಿಂಗ್ ಸೇರಿ ಇತರ ಯಾವುದೇ ಪ್ರಕರಣಗಳಲ್ಲಿನ ತಾಂತ್ರಿಕ ದೋಷಗಳನ್ನು ಬಗೆಹರಿಸಿ, ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ವೈ.ಎಸ್.ಪಾಟೀಲ ನಿರ್ದೇಶಿಸಿದರು.

ಮಧುಗಿರಿ ತಾಲೂಕಿಗೆ ಬಂಧಿಖಾನೆ ಕಾಮಗಾರಿಗಾಗಿ ಸರ್ಕಾರಿ ಜಮೀನನ್ನು ಕೂಡಲೇ ಮಂಜೂರು ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಅತಿವೃಷ್ಟಿಯಿಂದ ಸಂಭವಿಸಿದ ಮನೆ ಹಾನಿ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ನಿಗದಿಪಡಿಸಿರುವ ಎ,ಬಿ ಹಾಗೂ ಸಿ ಗ್ರೂಪ್‌ಗಳಿಗೆ ಸೇರದ ಪ್ರಕರಣಗಳನ್ನು ಕೈಬಿಡಬೇಕು ಹಾಗೂ ನೈಜ ಫಲಾನುಭವಿಗಳಿಗೆ ಶೀಘ್ರ ಪರಿಹಾರ ಚೆಕ್ ವಿತರಣೆ ಮಾಡಬೇಕು. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದಲ್ಲಿ ಅಂತಹವರ ವಿರುದ್ಧ ಯಾವುದೇ ರೀತಿಯ ದೂರುಗಳು ಕೇಳಿಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಲ್ಲ ತಾಲೂಕುಗಳಲ್ಲಿ ಕೋವಿಡ್ ವಾರ್ ರೂಂ : ತುಮಕೂರು ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭವಾಗಿದ್ದ ಕೋವಿಡ್ ವಾರ್‌ರೂಂ ಮಾದರಿಯಲ್ಲಿ ಎಲ್ಲ ತಾಲೂಕು ಕೇಂದ್ರದಲ್ಲಿಯೂ ವಾರ್‌ರೂಂ ಸ್ಥಾಪಿಸಲಾಗಿದೆ. ಐಸೋಲೇಷನ್‌ನಲ್ಲಿರುವ ಸೋಂಕಿತರ ಆರೋಗ್ಯ ವಿಚಾರಣೆ, ವೈದ್ಯಕೀಯ ಸಲಹೆ ಹಾಗೂ ಮಾಹಿತಿಗಾಗಿ ಕರೊನಾ ಹೆಲ್ತ್ ವಾರ್ ರೂಂ ಸ್ಥಾಪಿಸಲಾಗಿದೆ. ಸೋಂಕಿತರ ಆರೋಗ್ಯ ವಿಚಾರಣೆ ಹಾಗೂ ಮಾಹಿತಿಗಾಗಿ ಸ್ಥಾಪಿಸಲಾಗಿರುವ ತಾಲೂಕುವಾರು ಹೆಲ್ತ್ ವಾರ್‌ರೂಂ ಮತ್ತು ದೂರವಾಣಿ ಸಂಖ್ಯೆಗಳ ವಿವರ ಇಂತಿದೆ. ತುಮಕೂರು 0816-2213402/2277575, ಗುಬ್ಬಿ: 08131 222234, ಕುಣಿಗಲ್: 08132 220121, ಮಧುಗಿರಿ: 08137 200500, ಶಿರಾ: 08135 295617, ಪಾವಗಡ: 08136244246, ಕೊರಟಗೆರೆ: 08138 232153/295578, ಚಿ.ನಾ.ಹಳ್ಳಿ 08133 267242, ತುರುವೇಕೆರೆ 08139 287325.

ಜಿಲ್ಲೆಯಲ್ಲಿ ಸ್ಥಾಪಿಸಿರುವ ಎಲ್ಲ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸಕ್ರಿಯ ಹಾಗೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಐಸಿಯು ಬೆಡ್, ಔಷಧ ವ್ಯವಸ್ಥೆ ಮಾಡಿಕೊಳ್ಳಬೇಕು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net