ರೋಗಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಿ

dc TB meeting
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕ್ಷಯ ರೋಗಿಗಳಿಗೆ ಹಾಗೂ ಎಚ್‌ಐವಿ ಬಾಧಿತರಿಗೆ ಅವಶ್ಯಕ ಔಷಧಿಗಳನ್ನು ಪೂರೈಸುವ ಜತೆಗೆ ತಪ್ಪದೇ ಸಾಮಾಜಿಕ ಸವಲತ್ತುಗಳ ಒದಗಿಸುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿದೆ, ಈ ಸಂಬಂಧ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಸೂಚಿಸಿದರು. ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿರುವ ಕ್ಷಯ ರೋಗ ಹಾಗೂ ಎಚ್‌ಐವಿ ಸೋಂಕಿತರು ಹಾಗೂ ಬಾಧಿತರ ಸಂಖ್ಯೆಗೆ ಅನುಗುಣವಾಗಿ ಅವರಿಗೆ ಅವಶ್ಯಕವಾಗಿ ಬೇಕಾಗಿರುವ ಸಾಮಾಜಿಕ ಸವಲತ್ತುಗಳು ಮತ್ತು ಬೇಡಿಕೆಗಳ ಪಟ್ಟಿಯನ್ನು ಸಿದ್ದಪಡಿಸುವುದು ಪ್ರಮುಖ ಕೆಲಸವಾಗಿದೆ, ತದನಂತರ ಸಂಬಂಧಪಟ್ಟ ಇಲಾಖೆಗಳಿಗೆ ವರದಿಯನ್ನು ಸಲ್ಲಿಸಬೇಕು. ರೋಗ ಬಾಧಿತರಿಗೆ ಸರ್ಕಾರದಿಂದ ಸಿಗುವ ಅಗತ್ಯ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜದಲ್ಲಿ ಅವರು ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು. ಆರೋಗ್ಯ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಕ್ಷಯರೋಗದ ಬಗ್ಗೆ ತಪಾಸಣೆ ಕೈಗೊಳ್ಳಬೇಕು ಈ ಮೂಲಕ ಸೋಂಕಿತರನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

485 ಕ್ಷಯರೋಗಿಗಳಿಗೆ ಚಿಕಿತ್ಸೆ: ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಅದೃಷ್ಟವಶಾತ್ ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗಿಗಳ ಸಂಖ್ಯೆ ಕಡಿಮೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 485 ಕ್ಷಯರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಕ್ಷಯ ರೋಗಿಗಳಿಗೆ ಚಿಕಿತ್ಸೆ ಜತೆಗೆ ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಠಿಕ ಆಹಾರದ ಅವಶ್ಯಕತೆ ಇದ್ದು, ಪೌಷ್ಠಿಕ ಆಹಾರ ವಿತರಿಸಲು ಸ್ವಯಂ ಪ್ರೇರಿತವಾಗಿ ಕೈಗಾರಿಕೆಗಳ ಮುಖ್ಯಸ್ಥರು, ಸಂಘ-ಸಂಸ್ಥೆಗಳ ದಾನಿಗಳು ಮುಂದೆ ಬರಬೇಕಿದೆ, ಈ ಮೂಲಕ ಜಿಲ್ಲಾಡಳಿತದದೊಂದಿಗೆ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ವಿಶೇಷ ಆಂದೋಲನ: ಜಿಲ್ಲೆಯಾದ್ಯಂತ ಕ್ಷಯ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ 100 ದಿನಗಳ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಅದರಂತೆ ನಿರ್ದಿಷ್ಟ ಪ್ರದೇಶಗಳ ಜನರನ್ನು ತಪಾಸಣೆಗೆ ಒಳಪಡಿಸಿ, ಕ್ಷೇತ್ರ ಕ್ಷಯರೋಗ ಪತ್ತೆಹಚ್ಚಲು ಕ್ರಮ ವಹಿಸಲಾಗುತ್ತಿದೆ. 40 ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತ ಮಾಡಲು ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. 30ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತ ಗ್ರಾಮ ಪಂಚಾಯಿತಿಯಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ ಎಂದು ಡಿಸಿ ತಿಳಿಸಿದರು.

10 ನಮ್ಮ ಕ್ಲಿನಿಕ್ ಕಾರ್ಯಾರಂಭ: ಇದೇ ಸಂದರ್ಭದಲ್ಲಿ ನಡೆದ ನಮ್ಮ ಕ್ಲಿನಿಕ್ ಗಳ ಕುಂದು ಕೊರತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್‌ಕುಮಾರ್ ಅವರು, ಜಿಲ್ಲೆಯಲ್ಲಿ 10 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು. ಸಣ್ಣ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರೋಗ್ಯ ಕಾಪಾಡಲು ಸಹಾಯವಾಗುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು. ಸಾರ್ವಜನಿಕರು ನಮ್ಮ ಕ್ಲಿನಿಕ್‌ನಲ್ಲಿ ದೊರೆಯುವ ಆರೋಗ್ಯ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ನಮ್ಮ ಕ್ಲಿನಿಕ್ ಸೇರಿ ಜಿಲ್ಲೆಯಲ್ಲಿನ ಯಾವುದೇ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ವಿಷಯದಲ್ಲಿ ಲೋಪ ಕಂಡುಬಂದರೆ ತಕ್ಷಣ ಗಮನಕ್ಕೆ ತರಬೇಕು. ಈ ಮೂಲಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿ ನಡೆಯುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net