ಬಾಲ್ಯವಿವಾಹಗಳ ತಡೆಗೆ ಆದ್ಯತೆ ನೀಡಿ : ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

DSC_7949
Published on

ತುಮಕೂರು : ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ತಡೆಯಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ 2005 ಮತ್ತು ಸಖಿ ಯೋಜನೆಯ ಅನುಷ್ಠಾನ ಕುರಿತ ಜಿಲ್ಲಾ ಸಮನ್ವಯ ಸಮಿತಿ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ, ಸ್ಥೈರ್ಯನಿಧಿ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತ ಜಿಲ್ಲಾ ಸಮಿತಿ ಮತ್ತು ಜಿಲ್ಲಾಮಟ್ಟದ ವಿಧವಾ ಕೋಶ ಮತ್ತು ಶೆಲ್ಟರ್ ಹೋಮ್ಸ್‌ಗಳ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಮಟ್ಟದ ಅಧಿಕಾರಿಗಳು ಸೇರಿ ಬೀಟ್ ಪೊಲೀಸರು ಬಾಲ್ಯ ವಿವಾಹ ತಡೆಯವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು, ಸಾವಾಜಿಕ ಪಿಡುಗಾಗಿ ಕಾಡುತ್ತಿರುವ ಹಾಗೂ ಸವಾಜದಲ್ಲಿ ಅನಿಷ್ಠ ಪದ್ಧತಿಗಳಲ್ಲಿ ಒಂದಾದ ಬಾಲ್ಯವಿವಾಹ ತಡೆಯಲು ಸರ್ಕಾರ ಎಲ್ಲ ಇಲಾಖೆ ಗ್ರಾಮ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಬಾಲ್ಯವಿವಾಹ ನಿಷೇಧ ತಡೆ ಅಧಿಕಾರಿಗಳನ್ನಾಗಿ ನೇಮಕ ವಾಡಿದೆ.

ಬಾಲ್ಯವಿವಾಹ ತಡೆಯುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜವಾಬ್ದಾರಿ ವಾತ್ರವಲ್ಲ. ಎಲ್ಲ ಇಲಾಖೆಗಳ ಅಧಿಕಾರಿಗಳು ಇದರ ಜವಾಬ್ದಾರಿ ಹೊತ್ತು ಬಾಲ್ಯವಿವಾಹಕ್ಕೆ ಕಡಿವಾಣ ಹಾಕಬೇಕು. ವಿಶೇಷವಾಗಿ ಶಾಲೆಗಳ ಶಾಲಾ ಮುಖ್ಯಶಿಕ್ಷಕ, ಪಿಡಿಒ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಸಬ್ ಇನ್ ಪೆಕ್ಟರ್‌ಗಳು ಬಾಲ್ಯವಿವಾಹ ತಡೆಗೆ ಶ್ರಮಿಸಬೇಕು ಎಂದು ಸೂಚಿಸಿದರು.

ಬಾಲ್ಯ ವಿವಾಹ ನಡೆದಲ್ಲಿ ಅಲ್ಲಿನ ವ್ಯಾಪ್ತಿಗೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ವಾಡಲಾಗುವುದು ಎಂದು ಎಚ್ವರಿಕೆ ನೀಡಿದರು.

ಪ್ರತಿಯೊಂದು ಗ್ರಾಮಗಳಲ್ಲಿ ಬಾಲ್ಯವಿವಾಹ ನಡೆಸದಂತೆ ಅರಿವು ಮೂಡಿಸಿ, ತಾಲೂಕು ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ಸೂಚಿಸಿದರು. ಬಾಲ್ಯವಿವಾಹವನ್ನು ಪ್ರೋತ್ಸಾಹಿಸುವ ಅಥವಾ ಒತ್ತಾಯಪೂರ್ವಕವಾಗಿ ಮದುವೆ ನಡೆಸುವ ಪೋಷಕರ ಮೇಲೆ ಹಾಗೂ ಒಂದು ವೇಳೆ ಹುಡುಗ ಪ್ರಾಪ್ತ ವಯಸ್ಸಿನವನಾಗಿದ್ದರೆ ಅವನ ಮೇಲೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬಾಲ್ಯ ವಿವಾಹ ತಡೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ನಿಷೇಧ ಹಾಗೂ ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಸಮುದಾಯಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು, ಬಾಲ್ಯ ವಿವಾಹ ನಿಷೇಧ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಸೇರಿ ಇತರ ಕಾಯ್ದೆಯಡಿ ದಾಖಲಾಗಿ ಬಾಕಿ ಉಳಿದಿರುವ ಪ್ರಕರಣಗಳನ್ನು ಸಕಾಲಕ್ಕೆ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು. ಸ್ವಯಂ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

31 ಬಾಲ್ಯ ವಿವಾಹ ಪ್ರಕರಣ ದಾಖಲು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ನಟರಾಜು ವಾತನಾಡಿ, 2021-22ನೇ ಸಾಲಿನ ಜೂನ್ ಅಂತ್ಯಕ್ಕೆ 31 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 28 ವಿವಾಹಗಳನ್ನು ತಡೆಹಿಡಿಯಲಾಗಿದೆ. ಮೂರು ಬಾಲ್ಯವಿವಾಹ ನಡೆದಿದ್ದು, ಈ ಬಗ್ಗೆ ಎಫ್ ಐಆರ್ ದಾಖಲಾಗಿದೆ ಎಂದರು. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 20 ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣಗಳು ಇತ್ಯರ್ಥಗೊಂಡಿವೆ. ಉಳಿದಂತೆ ಸಂರಕ್ಷಣಾಧಿಕಾರಿಗಳ ಹಂತದಲ್ಲಿ 16, ನ್ಯಾಯಾಲಯದ ಹಂತದಲ್ಲಿ 2 ಪ್ರಕರಣಗಳಿವೆ. ಸಾಂತ್ವನ ಯೋಜನೆಯಡಿ ಕೌಟುಂಬಿಕ ಕಲಹದಲ್ಲಿ 142 ಪ್ರಕರಣಗಳು ದಾಖಲಾಗಿದ್ದು, 82 ಪ್ರಕರಣಗಳು ಇತ್ಯರ್ಥಗೊಂಡು 60 ಪ್ರಕರಣಗಳು ಬಾಕಿ ಇವೆ. ವರದಕ್ಷಿಣೆ ನಿಷೇಧ ಕಾಯ್ದೆಯಡಿ 23 ಪ್ರಕರಣಗಳು ದಾಖಲಾಗಿದ್ದು, 7 ಪ್ರಕರಣಗಳು ವಿಲೇವಾರಿಯಾಗಿದೆ ಹಾಗೂ 16 ಬಾಕಿ ಉಳಿದಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net