

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಾಲ್ಯವಿವಾಹ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಅನಿಷ್ಟ ಪದ್ಧತಿಯಾಗಿದ್ದು, ಈ ಶತಮಾನದಲ್ಲಿಯೂ ಈ ಪದ್ಧತಿ ಮುಂದುವರೆದಿರುವುದು ಶೋಚನೀಯ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಬೇಸರ ವ್ಯಕ್ತಪಡಿಸಿದರು.
ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿಹಮ್ಮಿಕೊಂಡಿದ್ದ ಬಾಲ್ಯವಿವಾಹ ಕುರಿತು ಜಾಗೃತಿ ಹಾಗೂ ಅನಿಷ್ಟ ಪದ್ಧತಿ ತಡೆ ಕುರಿತ ಅಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದರು. ಬಾಲ್ಯವಿವಾಹವೆಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದ ಒಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯವಿವಾಹವೆಂದು ಪರಿಗಣಿಸಲಾಗುತ್ತದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆದಕ್ಕೆ ಉಂಟು ಮಾಡುತ್ತದೆ ಎಂದರು.
ಈ ಅಪಾಯಕಾರಿ ಪದ್ಧತಿ ತಾಯಂದಿರ ಮರಣ, ಶಿಶು ಮರಣ, ಅಪೌಷ್ಟಿಕತೆಯನ್ನು ಉಂಟು ಮಾಡುವುದಲ್ಲದೇ ಮ್ಕಕಳ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು.
ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು: ಈ ಎಲ್ಲ ಕಾರಣಗಳಿಂದಾಗಿ ಬಾಲ್ಯವಿವಾಹವನ್ನು ಅನಿಷ್ಟ ಪದ್ಧತಿ ಹಾಗೂ ಸಾಮಾಜಿಕ ಪಿಡುಗು ಎಂದು ಗುರುತಿಸಿ, ಇದನ್ನು ನಿಷೇಧಿಸಲು ಕೇಂದ್ರ ಸರ್ಕಾರ ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳನ್ನು ನೇಮಿಸಲಾಗಿದೆ ಸಂಬಂಧಪಟ್ಟ ಈ ಎಲ್ಲ ಅಧಿಕಾರಿಗಳು ಬಾಲ್ಯವಿವಾಹ ನಡೆಯದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಬಾಲ್ಯವಿವಾಹದ ಕುರಿತು ಕಾನೂನಿನ ಅರಿವು ಮೂಡಿಸಬೇಕು ಎಂದು ಡಿಸಿ ಡಾ.ಎನ್.ಶಿವಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ.ದಂಡ
ಬಾಲ್ಯವಿವಾಹ ನಿರ್ಮೂಲನೆಯು ಕೇವಲ ಸರ್ಕಾರಿ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿರದೇ ಪ್ರತಿ ನಾಗರಿಕರ ಜವಾಬ್ದಾರಿಯಾಗಿರುತ್ತದೆ. ಬಾಲ್ಯವಿವಾಹ ನಿಷೇಧ (ಕರ್ನಾಟಕತಿದ್ದುಪಡಿ) ಅಧಿನಿಯಮ-2016ರ ಪ್ರಕಾರ ಒಂದು ವೇಳೆ ಬಾಲ್ಯವಿವಾಹ ನಡೆದಲ್ಲಿ 18 ವರ್ಷದೊಳಗಿನ ಹೆಣ್ಣು ಮಗುವನ್ನು ಮದುವೆಯಾದ ವಯಸ್ಕ ವ್ಯಕ್ತಿ, ಮದುವೆ ಮಾಡುವ ಪಾಲಕರು ಇಂತಹ ಮದುವೆಯಲ್ಲಿ ಭಾಗವಹಿಸುವವರು, ಬಾಲ್ಯ ವಿವಾಹವನ್ನು ಏರ್ಪಡಿಸುವ, ನಿರ್ದೇಶಿಸುವ, ನೆರೆವೇರಿಸುವ ಮತ್ತು ಮದುವೆಗೆ ಕುಮ್ಮಕ್ಕು ನೀಡುವ ಸಂಸ್ಥೆ ಅಥವಾ ವ್ಯಕ್ತಿ, ಕಾಯ್ದೆಯಡಿ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಿಸಿದವರು, ಮಗುವಿನ ಜವಾಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ನಿರ್ಲಕ್ಷತೆಯಿಂದ ಬಾಲ್ಯವಿವಾಹ ತಡೆಯಲು ವಿಫಲರಾದವರು ಸಹ ತಪ್ಪಿತಸ್ಥರು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇಂಥ ವಿಷಯದಲ್ಲಿ ಸಂಬಂಧಪಟ್ಟವರಿಗೆ ಕಾಯ್ದೆ ಪ್ರಕಾರ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಅಂದರೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಅಥವಾ ಇವೆರಡರಿಂದಲೂ ಶಿಕ್ಷೆಗೆ ಗುರಿಯಾಗಲಿದೆ, ಈ ಕಾಯ್ದೆಯಡಿ ಪ್ರತಿ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಪ್ರೇರಿತವಾಗಿ ದೂರು ದಾಖಲು ಮಾಡುವ ಅವಕಾಶವಿರುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.