ಬಾಬೂಜಿ, ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

DC Kumara Meeting Mandya
Published on

ಮಂಡ್ಯ: ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏ.5ರಂದು ಬಾಬು ಜಗಜೀವನ್ ರಾಂ ಜಯಂತಿ ಹಾಗೂ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡು ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗುವುದು. ಇಬ್ಬರು ಮಹಾನೀಯರ ತತ್ವ, ಆದರ್ಶ ಸರ್ವಕಾಲಕ್ಕೂ ಪ್ರತಿಯೊಬ್ಬರಿಗೂ ಅಗತ್ಯ. ಇವುಗಳನ್ನು ಮಕ್ಕಳಿಗೆ ತಿಳಿಸಿ ಎಂದರು.

ಶಾಲೆಗೆ ರಜೆ ಇರುವ ಹಿನ್ನಲೆಯಲ್ಲಿ ಮಕ್ಕಳಿಗೆ ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ವಿಚಾರಧಾರೆಯ ಕುರಿತು ಪ್ರಬಂಧವನ್ನು ಪತ್ರ ಮುಖೇನ ಪಡೆದು ಆಯ್ಕೆಯಾದವರಿಗೆ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಎರಡು ದಿನದ ಕಾರ್ಯಕ್ರಮದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಾತಿ ಕಡ್ಡಾಯ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿರುವ ಎಲ್ಲ ತಾಲೂಕನ್ನು ಒಳಗೊಂಡಂತೆ 10 ಜನರನ್ನು ಗುರುತಿಸಿ ಜಿಲ್ಲಾಮಟ್ಟದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು. ಇನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಮಂಟಪದೊಂದಿಗೆ ನಿರ್ಮಾಣ ಮಾಡಲು ವಾಸ್ತುಶಿಲ್ಪ ತಜ್ಞರೊಂದಿಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೂಲ ಹಕ್ಕು ಮತ್ತು ಕರ್ತವ್ಯಗಳು, ಸಂವಿಧಾನ ಪೀಠಿಕೆಗಳ ವಿಷಯಗಳ ಸ್ಪರ್ಧೆ ಆಯೋಜಿಸುವುದು ಉತ್ತಮ. ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಿರುವ ಸಂವಿಧಾನ ವಿಧಿಗಳ ಬಗ್ಗೆ ಆಶುಭಾಷಣ ಸ್ಪರ್ಧೆ ಆಯೋಜಿಸಿ ಸಣ್ಣ ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಿ ಎಂದರು.

ಸಭೆಯಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಜಯಂತಿ ಅಂಗವಾಗಿ ಸರ್ಕಾರಿ ಕಚೇರಿಗೆ ದೀಪಾಲಂಕಾರ, ಅಧಿಕಾರಿಗಳು ಹಾಗೂ ಸಿಬ್ಬಂದಿ ಜಯಂತಿಗೆ ಕಡ್ಡಾಯವಾಗಿ ಹಾಜರಾಗಬೇಕು. ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ, ಹೆದ್ದಾರಿಯಲ್ಲಿ ಕಮಾನು ನಿರ್ಮಾಣ, ಪುಸ್ತಕ ಮೇಳ ಆಯೋಜನೆ, ಶಾಲಾ ಕಾಲೇಜಿನಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಕುರಿತು ಚರ್ಚೆ, ಆಶುಭಾಷಣ, ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಎಲ್.ಇ.ಡಿ ವಾಹನಗಳ ಮೂಲಕ ವಿಚಾರಧಾರೆಗಳ ಪ್ರಚಾರ, ಸಾಧನೆ ಮಾಡಿರುವ ಅಧಿಕಾರಿಗಳಿಗೆ ಸನ್ಮಾನ, ಎಲ್ಲ ಗ್ರಾಪಂ ಕಚೇರಿಯಲ್ಲಿ ಜಯಂತಿ ಆಚರಣೆಯಾಗಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್, ಮಂಡ್ಯ ಉಪವಿಭಾಗದ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net