ಮಹಾರಾಷ್ಟ್ರದಿಂದ ಬರುವವರಿಗೆ ಷರತ್ತು, ಉಡುಪಿ ಡಿಸಿ ಜಿ.ಜಗದೀಶ್ ಮಾಹಿತಿ

jagadeesh
Published on

ಉಡುಪಿ: ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರು ಸೇವಾಸಿಂಧು ಆ್ಯಪ್‌ನಲ್ಲಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಅವರಿಗೆ ಜಿಲ್ಲಾಡಳಿತ 2-3 ದಿನಗಳ ಆಯ್ಕೆ ನೀಡಲಿದೆ. ತಮ್ಮ ಅನುಕೂಲದ ದಿನದಂದು ಅವರು ಜಿಲ್ಲೆಗೆ ಬರಬಹುದು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಬೇರೆ ರಾಜ್ಯದವರಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಅನ್ಯ ರಾಜ್ಯದವರು ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ-ಪಾಸ್ ನೀಡಲಾಗುವುದು. 14 ದಿನ ಹೋಂ ಕ್ವಾರಂಟೈನ್‌ಗೆ ಎಲ್ಲ ವ್ಯವಸ್ಥೆ ಇದ್ದರೆ ಮಾತ್ರ ಹೊರ ರಾಜ್ಯದಿಂದ ಜಿಲ್ಲೆಗೆ ಬರಬಹುದು. ಮನೆಯಲ್ಲಿ ತೊಂದರೆಯಾದರೆ 14 ದಿನ ಹೋಟೆಲ್ ಕ್ವಾರಂಟೈನ್. ಖರ್ಚು ವೆಚ್ಚಗಳನ್ನು ಅವರೇ ವಹಿಸಿಕೊಳ್ಳಬೇಕು ಎಂದರು.

ಪಾಸ್ ಪ್ರಕ್ರಿಯೆ ಶುರು, ಇಂದಿನಿಂದ ಮತ್ತೆ ಆಗಮನ

ಮಹಾರಾಷ್ಟ್ರದಿಂದ ಬರುವವರಿಗೆ ಪಾಸ್‌ಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಜೂ.11ಕ್ಕೆ 166 ಮಂದಿ, 12ರಂದು 131 ಮಂದಿ, 13ಕ್ಕೆ 76 ಮಂದಿ, 14ರಂದು 93 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹೊರ ರಾಜ್ಯದಿಂದ ಬಂದವರಿಗಾಗಿ ಜಿಲ್ಲೆಯ ಎಲ್ಲ್ಲ ತಾಲೂಕು ಕೇಂದ್ರಗಳಲ್ಲಿ ತಲಾ 2 ಜಿಲ್ಲಾ ಸ್ವೀಕೃತಿ ಕೇಂದ್ರ ತೆರೆಯಲಾಗಿದೆ. ಇಲ್ಲಿ ನೋಂದಣಿ ಮಾಡಿದ ಬಳಿಕ ಮನೆಗೆ ತೆರಳಬಹುದು. ಹೋಂ ಕ್ವಾರಂಟೈನ್‌ಗೆ ಒಳಗಾದವರ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಪಕ್ಕದ 2 ಮನೆಗಳಿಗೆ ಮಾಹಿತಿ ನೀಡಲಾಗುತ್ತದೆ. ಹೋಂ ಕ್ವಾರಂಟೈನ್‌ನಲ್ಲಿರುವವರು ಹೊರಗಡೆ ಬಂದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದರೆ ಅವರು ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಉಲ್ಲಂಘನೆ ಮಾಡಿದಂತಾಗುತ್ತದೆ. ಪ್ರತೀ ಗ್ರಾಪಂ ಹಾಗೂ ನಗರಗಳಲ್ಲಿ ವಾರ್ಡ್ ಮಟ್ಟದ 3 ಸದಸ್ಯರ ನಿಗಾ ತಂಡವನ್ನು ರಚಿಸಲಾಗಿದೆ. ಫ್ಲಯಿಂಗ್ ಸ್ಕ್ವಾಡ್ ಮೇಲುಸ್ತುವಾರಿ ನೋಡಲಿದೆ. ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಬಳಸುವಂತಿಲ್ಲ ಎಂದರು.

ಪರೀಕ್ಷೆ ಮುಗಿಯುವವರೆಗೆ ಮುಂದೂಡಿ

ಹೋಂ ಕ್ವಾರಂಟೈನ್ ಸಂದರ್ಭ ಮನೆ ಸೀಲ್‌ಡೌನ್ ಆಗುವುದರಿಂದ ಮನೆಯಲ್ಲಿ ಎಸ್ಸೆಸ್ಸೆಲ್ಸಿ, ಇನ್ನಿತರ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿದ್ದರೆ ಹೊರ ರಾಜ್ಯದಿಂದ ಬರುವ ನಿರ್ಧಾರವನ್ನು ಪರೀಕ್ಷೆ ಮುಗಿಯುವ ತನಕ ಮುಂದೂಡುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಹೊರ ರಾಜ್ಯದಿಂದ ಬಂದ ಗರ್ಭಿಣಿ, ಹಿರಿಯರು, ಮಕ್ಕಳಿಗೆ ಮಾತ್ರ ರ‌್ಯಾಂಡಮ್ ಟೆಸ್ಟ್ ಇರಲಿದೆ. ಉಳಿದವರಿಗೆ ರೋಗ ಲಕ್ಷಣ ಇದ್ದರೆ ಮಾತ್ರ ಸ್ವಾಬ್ ತೆಗೆಯುತ್ತಾರೆ. ವಿದೇಶದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದ್ದು, ಮತ್ತೆ 7 ದಿನ ಹೋಂ ಕ್ವಾರಂಟೈನ್ ಇರಲಿದೆ.

ರೈಲಿಗೆ ಉಡುಪಿಯಲ್ಲಷ್ಟೇ ನಿಲುಗಡೆ

ಮಹಾರಾಷ್ಟ್ರದಿಂದ ಬರುವ ರೈಲು ಉಡುಪಿಯಲ್ಲಿ ಮಾತ್ರ ನಿಲುಗಡೆಯಾಗಲಿದೆ. ಬೇರೆಲ್ಲೂ ಪ್ರಯಾಣಿಕರಿಗೆ ಇಳಿಯಲು ಅವಕಾಶವಿಲ್ಲ. ಉಡುಪಿಯಲ್ಲೇ ನೋಂದಣಿ ಮಾಡಿಕೊಳ್ಳಬೇಕು. ಪಾಸ್ ಇಲ್ಲದೆ ಬಂದವರಿಗೆ ಸ್ಥಳದಲ್ಲೇ ನಿಡಲಾಗುವುದು ಎಂದು ಡಿಸಿ ವಿವರಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಕೋವಿಡ್19 ಸಂಬಂಧಪಟ್ಟಂತೆ ಸುಳ್ಳುಸುದ್ದಿಗಳನ್ನು ಹಬ್ಬಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಬಂದ 947 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಸರ್ಕಾರದಿಂದ 1 ರೂ.ವನ್ನೂ ನೀಡಿಲ್ಲ. ಯಾರು ಕೂಡ ತಪ್ಪು ಮಾಹಿತಿ ಹಬ್ಬಿಸಬಾರದು.

- ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

ಸಹಾಯವಾಣಿ ಆರಂಭ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 0820-2574931 ಅಥವಾ 0820-2571500 ಕರೆ ಮಾಡಿ ತಮ್ಮ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಬಹುದು. ಅಗತ್ಯದಾಖಲೆಗಳನ್ನು ಇ-ಮೇಲ್ ವಿಳಾಸ ್ಠಛ್ಠಜಿಛ್ಚ.ಛ್ಝಿಟ್ಝಜ್ಞಿಛಿಃಜಞಜ್ಝಿ.್ಚಟಞ ಅಥವಾ ವಾಟ್ಸಪ್ ಸಂಖ್ಯೆ 9880831516ಕ್ಕೆ ಸಲ್ಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net