ಕಬ್ಬು ಕಟಾವು, ಸಾಗಣೆ ವೆಚ್ಚ ಕಡಿಮೆ ಮಾಡಲು ಪ್ಯಾರಿ ಕಾರ್ಖಾನೆಗೆ ಡಿಸಿ ಸೂಚನೆ

sugarcane meeting at dc office
Published on

ಕಾರವಾರ: ಕಬ್ಬು ಕಟಾವು ಮತ್ತು ಸಾಗಾಣೆ ವೆಚ್ಚ (ಎಚ್‌ಎಂಟಿ)ಇಳಿಸಬೇಕು. ಪ್ರತಿ ಟನ್ ಕಬ್ಬಿನ ಮೇಲೆ 305 ರೂ.ಹಿಂದಿನ ಬಾಕಿಯನ್ನು ಪಾವತಿಸಬೇಕು. ಕಬ್ಬಿನ ತೂಕ, ಇಳುವರಿ ಮುಂತಾದ ಅಂಶಗಳನ್ನು ಪಾರದರ್ಶಕವಾಗಿ ರೈತರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಹಳಿಯಾಳ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನವೆಂಬರ್ 1 ರಿಂದ 15 ರ ನಡುವೆ ಈ ವರ್ಷದ ಕಬ್ಬು ಅರೆಯುವ ಪ್ರಕ್ರಿಯೆ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರು, ಕಾರ್ಖಾನೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಮನ್ವಯ ಸಭೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿತು.

ಕಬ್ಬು ಬೆಳೆಗಾರರರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು. ರೈತರಿಗೆ ಕಬ್ಬು ಕಟಾವು ಮಾಡಲು ಆದ್ಯತಾ ಪಟ್ಟಿ ನೀಡಬೇಕು ಎಂದು ಪ್ಯಾರಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವೆಂಕಟರಾವ್ ಅವರಿಗೆ ಡಿಸಿ ಸೂಚನೆ ನೀಡಿದರು. ಈ ಹಿಂದೆ ರೈತರ ಮೇಲೆ ಕಾರ್ಖಾನೆ ದಾಖಲಿಸಿರುವ ಪ್ರಕರಣಗಳ ವಿವರ ಪಡೆದು, ಎಸ್‌ಪಿ ಅವರ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ರೈತರಿಗೆ ಭರವಸೆ ನೀಡಿದರು.

ಕಬ್ಬುಎಚ್ಎಂಟಿ ಇಳಿಸಿ:

ಪ್ರತಿ ಟನ್‌ಗೆ ರೂ.3,678 ನ್ಯಾಯ ಮತ್ತು ಲಾಭದಾಯಕ ಬೆಲೆ(ಎಫ್‌ಆರ್‌ಪಿ)ಯನ್ನು ಸರ್ಕಾರ ನಿಗದಿಪಡಿಸಿದೆ. ಅದೇ ರೀತಿ ಪ್ರತಿ ಟನ್ ಗೆ ಗರಿಷ್ಠ 772 ಎಚ್‌ಎಂಟಿಯನ್ನು ಬೇರೆಲ್ಲ ಕಾರ್ಖಾನೆಗಳು ಪಡೆಯುತ್ತಿವೆ. ಆದರೆ, ಪ್ಯಾರಿ ಕಾರ್ಖಾನೆ 893 ರೂ. ಎಚ್‌ಎಂಟಿ ಕಡಿತ ಮಾಡುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ರೈತ ಮುಖಂಡ ನಾಗೇಂದ್ರ ಜೀವೋಜಿ ಆಕ್ಷೇಪಿಸಿದರು. ಕಬ್ಬು ಬೆಳೆಗಾರರ ಸಂಘದ ಸಂದೀಪ ಕುಮಾರ ಬೊಬಾಟಿ ಹಾಗೂ ಇತರರು ಮಾತನಾಡಿದರು. ಅಪರ ಜಿಲ್ಲಾಧಿಕರಿ ರಾಜು ಮೊಗವೀರ, ಕಾರವಾರ ಎಸಿ ಜಯಲಕ್ಷ್ಮೀ ರಾಯಕೋಡ, ಎಎಸ್‌ಪಿ. ಆರ್. ಜಯಕುಮಾರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ ವೇದಿಕೆಯಲ್ಲಿದ್ದರು.

14,638 ಹೆಕ್ಟೇರ್ ಕಬ್ಬು
ಜಿಲ್ಲೆಯಲ್ಲಿ 2022-23 ರಲ್ಲಿ 10,18,382 ಮೆ.ಟನ್ ಕಬ್ಬು ನುರಿಸಲಾಗಿದ್ದು,1,19,478 ಮೆ.ಟನ್ ಸಕ್ಕರೆ ಉತ್ಪಾದಿಸಲಾಗಿದ್ದು, 11.97 ಶೇಕಡ ಇಳುವರಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕಬ್ಬು (ಹೊಸ)6,633 ಹೆಕ್ಟೇರ್ ಹಾಗೂ ಕಬ್ಬು (ಕೋಳೆ)8,005 ಹೆಕ್ಟೇರ್ ಸೇರಿದಂತೆ ಒಟ್ಟು 14,638 ಹೆಕ್ಟೇರ್ ನಲ್ಲಿ ಕಬ್ಬು ಬೆಳೆಯಲಾಗಿದೆ.


ಡಿಸಿ ಸೂಚನೆ

  • *ಕಾರ್ಖಾನೆಯ ವ್ಯಾಪ್ತಿಯ ಹೊರಗೆ ರೈತರಿಗೆ ಕಾಣುವ ರೀತಿಯಲ್ಲಿ ಕಬ್ಬಿನ ತೂಕದ ಯಂತ್ರವನ್ನು ಬರುವ ದಿನಗಳಲ್ಲಿ ಅಳವಡಿಸಬೇಕು. ಅಲ್ಲಿಯವರೆಗೆ ಕಬ್ಬಿನ ತೂಕದ ಬಗ್ಗೆ ನಿಗಾ ಇಡಲು ರೈತ ಮುಖಂಡರಿರುವ ಸಮಿತಿಯೊಂದನ್ನು ರಚಿಸಬೇಕು.
  • *ಕಬ್ಬು ಕಟಾವು ಮತ್ತು ಸಾಗಾಣೆ ವೆಚ್ಚ 893 ರೂ.ಗಳನ್ನು ಕಡಿಮೆ ಮಾಡಬೇಕು.
  • *ರೈತರು ಸಂಕಷ್ಟದಲ್ಲಿದ್ದು, ಕಳೆದ ಸಾರಿ ಸರ್ಕಾರ ಘೋಷಿಸಿದ ಹೆಚ್ಚುವರಿ ಪ್ರೋತ್ಸಾಹಧನ 150 ರೂ.ಗಳನ್ನು ಕಾರ್ಕಾನೆ ನೀಡಬೇಕು.
  • *2016-17 ರಲ್ಲಿನ ಎಫ್.ಆರ್.ಪಿ ಮೇಲಿನ ಹೆಚ್ಚುವರಿ ಬಾಕಿ ಮೊತ್ತ ರೂ.305 ನ್ನು ಬೆಳಗಾರರಿಗೆ ಪಾವತಿಸಬೇಕು.



ರೈತರ ಬೇಡಿಕೆಗಳು

  • *ಕಾರ್ಖಾನೆ ರೈತರಿಗೆ ಹೆಚ್ಚುವರಿ ಎಚ್‌ಎಂಟಿ ವಿಧಿಸುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಕಳೆದ ವರ್ಷದ ಸರ್ಕಾದ ಕಬ್ಬು ಆಯುಕ್ತರ ಸಭೆಯ ನಿರ್ಣಯ ಏನಾಯಿತು ಬಹಿರಂಗ ಮಾಡಬೇಕು.
  • *ಲಗಾನಿ(ಕಬ್ಬು ಕಡಿಯುವ ಕಾರ್ಮಿಕರ ತಂಡ) ದರವನ್ನು ಬೇಕಾಬಿಟ್ಟಿ ಪಡೆಯಬಾರದು. ಮತ್ತು ಹೆಚ್ಚುವರಿ ಮೊತ್ತ ಪಡೆದರೆ ಕಾರ್ಖಾನೆ ರೈತರಿಗೆ ಆ ಮೊತ್ತ ಭರಿಸಿಕೊಡಬೇಕು.
  • *ರೈತರು ಕಡಿದು ತಂದ ಕಬ್ಬು ತುಂಬಿದ ಲಾರಿಗಳನ್ನು ನಾಲ್ಕೈದು ದಿನ ಕಾರ್ಖಾನೆಯ ಹೊರಗಡೆ ಬಿಸಿಲಲ್ಲಿ ನಿಲ್ಲಿಸುವುದನ್ನು ಬಿಡಬೇಕು.
  • *ಕಬ್ಬಿಗೆ ಎಷ್ಟು ಇಳುವರಿ ಬಂದಿದೆ ಎಂಬುದನ್ನು ರೈತರಿಗೆ ಕಾಲಕಾಲಕ್ಕೆ ತಿಳಿಸಬೇಕು.

ಮಳೆಯಾಗದ ಕಾರಣ ಕಬ್ಬಿನ ಇಳುವರಿ ಸಮರ್ಪಕವಾಗಿ ಆಗಿಲ್ಲ. ಕಾರ್ಖಾನೆ ತೂಕದಲ್ಲಿ, ಇಳುವರಿಯಲ್ಲಿ ಮೋಸ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕುವರು. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ಪರವಾಗಿ ಕಾರ್ಖಾನೆಗೆ ಸೂಚನೆ ನೀಡಬೇಕು.ಸುನೀಲ ಹೆಗಡೆಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net