

ಕನಕಗಿರಿ: ತಾಲೂಕಿನ ಬಂಕಾಪುರ ತೋಳ ಧಾಮಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ತೋಳಧಾಮದಲ್ಲಿ ಕಳೆದ ತಿಂಗಳು ಒಂದು ತೋಳ ಒಂಬತ್ತು ಹಾಗೂ ಮತ್ತೊಂದು ತೋಳವು ಐದು ಮರಿಗಳಿಗೆ ಜನ್ಮ ನೀಡಿದ್ದವು. ಈ ಬಗ್ಗೆ ಇಲಾಖೆ ಸಚಿವ ಈಶ್ವರ ಖಂಡ್ರೆ ಮಾಹಿತಿ ಹಂಚಿಕೊಂಡಿದ್ದರು. ದಿನದಿಂದ ದಿನಕ್ಕೆ ಈ ತೋಳ ಧಾಮವು ಮುನ್ನೆಲೆಗೆ ಬರುತ್ತಿದೆ. ತೋಳಗಳ ರಕ್ಷಣೆ ಜತೆಗೆ ಆಹಾರ ಸರಪಳಿ ನಿರ್ಮಾಣಕ್ಕಾಗಿ ಇಲಾಖೆಯು ನಾನಾ ಕ್ರಮಗಳನ್ನು ಧಾಮದಲ್ಲಿ ಕೈಗೊಂಡಿದೆ. ಹೀಗಾಗಿ ಕೊರಳಲ್ಲಿ ಕ್ಯಾಮರಾ ಹಾಕಿಕೊಂಡು ಬಂದಿದ್ದ ಡಿಸಿ ನಲಿನ್, ತೋಳವಿದ್ದ ಗುಹೆಯ ಬಳಿ ಅವುಗಳನ್ನು ನೋಡಲು ಕಾದರು. ಆದರೆ, ತಿಂಗಳ ಮರಿಗಳಾದ್ದರಿಂದ ಬೇರೆಡೆಗೆ ತೆರಳಿರಬಹುದೆಂದು ಧಾಮದಲ್ಲಿ ನೀರಿನ ತೊಟ್ಟಿ ಹಾಗೂ ಕೈಗೊಂಡ ಕ್ರಮಗಳನ್ನು ವೀಕ್ಷಿಸಿ ಆರ್‌ಎಫ್‌ಒ ಸುಭಾಷಚಂದ್ರ ಅವರೊಂದಿಗೆ ಚರ್ಚಿಸಿ ಮರಳಿದರು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ಅರಣ್ಯ ಇಲಾಖೆ ಸಿಬ್ಬಂದಿ ಶ್ರೀನಿವಾಸ ಇದ್ದರು.
ತೋಳ ಸಾವು: ತೋಳಗಳ ಜನನದಿಂದ ಸಂತಸದಲ್ಲಿದ್ದ ಅರಣ್ಯ ಇಲಾಖೆಗೆ ಭಾನುವಾರ ತೋಳವೊಂದು ಸಾವನ್ನಪ್ಪಿರುವುದು ಬೇಸರವನ್ನುಂಟು ಮಾಡಿದೆ. ಎರಡು ವರ್ಷದ ಗಂಡು ತೋಳ ಚಿರತೆ ಅಥವಾ ತೋಳಗಳ ನಡುವಿನ ಕಾದಾಟದಲ್ಲಿ ಸಾವನ್ನಪ್ಪಿದೆ ಎನ್ನಲಾಗಿದೆ. ಅದರ ಕಳೆಬರದ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯ ಸಂಸ್ಕಾರ ಮಾಡಲಾಯಿತು.