ಲೈನ್‌ಮನೆಗಳಲ್ಲಿ ವಾಸಿಸುವ ಪರಿಶಿಷ್ಟರಿಗೆ ನಿವೇಶನ ಒದಗಿಸಲು ಅಗತ್ಯ ಕ್ರಮ: ಬಿ.ಸಿ.ಸತೀಶ

18adarshkdga5
Published on

ಜಿಲ್ಲೆಯಲ್ಲಿ ೩೫೯ ಎಕರೆ ಸರ್ಕಾರಿ ಜಾಗವನ್ನು ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಕಾಯ್ದಿರಿಸಲಾಗಿದೆ. ಗ್ರಾ.ಪಂ.ನಿವೇಶನ ರಹಿತರ ಪಟ್ಟಿಗೆ ಈಗಾಗಲೇ ಸೇರಿರುವ ಕುಟುಂಬಗಳಿಗೆ ಮೊದಲ ಆದ್ಯತೆ ಮೇರೆಗೆ ನಿವೇಶನ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.


ಲೈನ್‌ಮನೆಗಳಲ್ಲಿ ವಾಸಿಸುವ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೇಶನ ರಹಿತ ಕುಟುಂಬಗಳಿಗೆ ಕೂಡಲೇ ನಿವೇಶನ ಕಲ್ಪಿಸಿ ಕೊಡಬೇಕೆಂಬ ಕೂಗು ’ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕೇಳಿಬಂತು. ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.


ನಿವೇಶನಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನು ಗ್ರಾ.ಪಂ.ಗಳಿಗೆ ನೀಡಲಾಗುವುದು. ಗ್ರಾ.ಪಂ. ಒದಗಿಸಿದ ಭೂಮಿಯನ್ನು ನಿವೇಶನ ರಹಿತರಿಗೆ ಒದಗಿಸುವ ಕೆಲಸ ಗ್ರಾ.ಪಂ.ಮಟ್ಟದಲ್ಲೇ ಮಾಡಲಾಗುತ್ತದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ರೈತರು ವನ್ಯ ಜೀವಿಗಳ ಹಾವಳಿಯಿಂದ ಹಲವಾರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅಹವಾಲುಗಳು ಸಲ್ಲಿಕೆ ಆಗುತ್ತಲೇ ಇವೆ. ಜತೆಗೆ ಈ ಭಾಗದಲ್ಲಿ ವಿದ್ಯುತ್ ಉಪ ಕೇಂದ್ರದ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ. ಇದರಿಂದ ಈ ಭಾಗದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.


ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕಿ ಗೀತಾ ಮಾತನಾಡಿ, ಗ್ರಾಮದ ರಸ್ತೆಯು ಕಿರಿದಾಗಿದ್ದು, ಬಸ್ ವ್ಯವಸ್ಥೆ ಕಲ್ಪಿಸುವುದು ಕಷ್ಟಕರವಾಗಿದೆ. ಆ ನಿಟ್ಟಿನಲ್ಲಿ ಮಿನಿ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.


ವನ್ಯಜೀವಿ ಮತ್ತು ಮಾನವ ಸಂಘರ್ಷಗಳು ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇದರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಷ್ಟಕರವಾಗಿದೆ. ಜತೆಗೆ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆನಾಶವಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.


ತೋಟದಲ್ಲಿ ಮಳೆ ಇನ್ನಿತರ ಕಾರಣಗಳಿಂದ ಹಾನಿಯಾದ ಮರಗಳನ್ನು ಸ್ವ ಬಳಕೆಗಾಗಿ ಉಪಯೋಗಿಸಲು ನಿಯಮ ಸಡಿಲಿಕೆ ಮಾಡಿ ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಕೇಳಿಕೊಂಡರು. ಹೊಸೂರು ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತರಿಗೆ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ವಸತಿ ಕಲ್ಪಿಸಿಕೊಡಬೇಕು. ಕೃಷಿ ಭೂಮಿಯನ್ನು ಕಂದಾಯಕ್ಕೆ ನಿಗದಿ ಪಡಿಸಬೇಕು ಎಂದು ಮನವಿ ಮಾಡಿದರು.


ಗ್ರಾಮದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಹೆಚ್ಚಾಗಿ ನಡೆಯುತ್ತಿದ್ದು, ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಭೂ ದಾಖಲೆಗಳಲ್ಲಿ ಪಟ್ಟೆದಾರರ ಹೆಸರು ಸೇರಿಸುವುದು ಹಾಗೂ ಪೌತಿ ಖಾತೆ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಹಂಚಿಕೊಂಡರು.


ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಕೆಲವರಿಗೆ ಇನ್ನೂ ಕೂಡ ಪಡಿತರ ಸಿಗುತ್ತಿಲ್ಲ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಅವರಿಗೆ ಬೇಕಾದ ಮೂಲ ದಾಖಲೆಗಳನ್ನು ಒದಗಿಸಿ ಕೊಡಬೇಕೆಂದು ಅಧಿಕಾರಿಗಳ ಗಮನಕ್ಕೆ ತಂದರು.


ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಹಾಗೂ ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಭೂ ದಾಖಲೆಗಳು ಹಾಗೂ ಕಂದಾಯ ನಿಗದಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.


ಅಬಕಾರಿ ಇಲಾಖೆ ಅಧಿಕಾರಿ ಜಗದೀಶ್ ಮಾತನಾಡಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಂಡುಬಂದಲ್ಲಿ ಕೂಡಲೇ ಮೊ.ಸಂ.೯೪೪೮೮೭೯೯೬೯ ಸಂಪರ್ಕಿಸಬಹುದು. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.


ಹೀಗೆ ಜನರ ಸಮಸ್ಯೆಗಳನ್ನು ಆಲಿಸಿದ ವಿವಿಧ ಇಲಾಖೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಕಾರ್ಯಕ್ರಮಕ್ಕೆ ಮೊದಲು ಜಿಲ್ಲಾಧಿಕಾರಿ ಗಿಡ ನೆಡುವುದರೊಂದಿಗೆ ಕಾರ್ಯಕ್ರಮ ಆರಂಭಿಸಿದರು.
ಕಳತ್ಮಾಡು ಗ್ರಾ.ಪಂ. ಅಧ್ಯಕ್ಷೆ ಶಾಂತಿ ಸೋಮಯ್ಯ, ಉಪಾಧ್ಯಕ್ಷ ಪೂಣಚ್ಚ, ತಹಶೀಲ್ದಾರ್ ಅರ್ಚನಾ ಭಟ್, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net