

ಹುಲಸೂರು: ಸ್ವಾತಂತ್ರ ದೊರಕಿ ಏಳು ದಶಕವಾದರೂ ಬಸ್ ಮುಖ ಕಾಣದ ಮಾಚನಾಳ, ಮೀರಖಲ್, ವಾಂಜರವಾಡಿ ಮತ್ತು ತೋಗಲೂರ, ಕದಿರಾಬಾದ್ ವಾಡಿ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿ ಶೀಘ್ರ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಪಟ್ಟಣದ ತಹಸಿಲ್ ಕಚೇರಿಗೆ ಶನಿವಾರ ದಿಢೀರ್ ಭೇಟಿ ನೀಡಿ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ತಾಲೂಕಿನಲ್ಲಿ ಶಿಥಿಲ ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡಗಳ ದುರಸ್ತಿ, ಕುಡಿಯುವ ನೀರು, ಆಟದ ಮೈದಾನ ಅವಶ್ಯಕತೆ ಇದೆ. ವಸತಿ ನಿಲಯ ಸುಧಾರಣೆ, ಹಾಳಾದ ರಸ್ತೆ ಸುಧಾರಣೆಗೆ ಮಾಹಿತಿ ಸಂಗ್ರಹಿಸಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಅಕ್ರಮ ಮರಳು ಸಾಗಣೆ, ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಹಾಗೂ ಇತರೆ ವಿಷಯಗಳ ಕುರಿತು ಇಲಾಖಾವಾರು ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಹಲವು ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಸರ್ಕಾರಿ ನೌಕರರೇ ಹೆಚ್ಚಾಗಿದ್ದು, ಪ್ರಜ್ಞಾವಂತರೆ ಹೆಲ್ಮೆಟ್ ಧರಿಸುತ್ತಿಲ್ಲ. ಎಲ್ಲ ಸವಾರರು ಹೆಲ್ಮೆಟ್ ಧರಿಸಿಯೇ ಸಂಚರಿಸಬೇಕು ಎಂದರು.
ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು, ಹುಲಸೂರು ಪಟ್ಟಣ ಪಂಚಾಯಿತಿ ಮಾಡಲು ಶಿಫಾರಸ್ಸು ಮಾಡಬೇಕು, ಜಮೀನುಗಳಿಗೆ ಕಾಡು ಪ್ರಾಣಿಗಳು ಬೆಳೆ ನಾಶ ಮಾಡುತ್ತಿದ್ದು, ಕಡಿವಾಣ ಹಾಕಬೇಕು, ಶೌಚಗೃಹ ನಿರ್ಮಿಸಬೇಕು, ಹೊಸ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಯುವಕರಾದ ದಯಾನಂದ ನಿಮಾಣೆ, ಲೋಕೇಶ ಧಬಾಲೆ, ಗುಲಾಮ್ ಬಡಾಯಿ ಸೇರಿ ಹಲವರು ಮನವಿ ಪತ್ರ ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಎಡಿ ಮಹದೇವ ಜಮ್ಮು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಾಂತ ಕನ್ನಾಡೆ, ಗ್ರಾಪಂ ಪಿಡಿಒ ಸಂದೀಪ ಬಿರಾದಾರ, ಪಿಎಸ್‌ಐ ನಾಗೇಂದ್ರ ಇತರರಿದ್ದರು.