

ಜೊಯಿಡಾ: ಅರಣ್ಯ ಇಲಾಖೆ ಮತ್ತು ಸಾರ್ವಜನಿಕ ರು ಪರಸ್ಪರ ಸಮನ್ವಯದಿಂದ ತಮ್ಮ ನಡುವಿನ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಒಂದು ಗ್ರಾಮದಿಂದ ಒಂದು ಗ್ರಾಮಕ್ಕೆ ತೆರಳಲು ಅರಣ್ಯಾಧಿಕಾರಿಗಳು ಅಡ್ಡಿಪಡಿಸುತ್ತಿರುವ ಕುರಿತು ದೂರಿಗೆ ಸಂಬಂಧಿಸಿದಂತೆ ಆರಣ್ಯ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಸಂಚರಿಸಲು ಗ್ರಾಮಸ್ಥರಿಗೆ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಈ ರೀತಿಯ ಹಲವು ಸಮಸ್ಯೆಗಳನ್ನು ಪರಸ್ಪರ ಸಮನ್ವಯದಿಂದ ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಮಾಜಿ ಸೈನಿಕರಿಗೆ ಮೀಸಲಿಟ್ಟ ಭೂಮಿ ಮಂಜೂರು ಮಾಡುವಂತೆ ಮಾಜಿ ಸೈನಿಕರು ಸಲ್ಲಿಸಿದ ಮನವಿಯ ಕುರಿತಂತೆ ಜಿಲ್ಲೆಯಲ್ಲಿ ಜಾಗದ ಕೊರತೆಯಿದ್ದು ಮಾಜಿ ಸೈನಿಕರಿಗೆ ನಿವೇಶನ ನೀಡುವ ಕುರಿತಂತೆ ಪರಿಶೀಲಿಸಲಾಗುವುದು ಎಂದರು.
ಶಿವಪುರ ಸೇತುವೆ ಬಳಿ ಕಾಳಿ ನದಿಗೆ ನಿರ್ಮಿಸಿರುವ ತೂಗು ಸೇತುವೆ ಬಳಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸಲ್ಲಿಕೆಯಾದ ಮನವಿಗೆ ಸಂಬಂಧಿಸಿದಂತೆ, ಕೂಡಲೇ ಸೇತುವೆ ಬಳಿ ಸ್ಥಳೀಯ ಒಬ್ಬರನ್ನು ಸುರಕ್ಷತೆ ಮೇಲ್ವಿಚಾರಣೆಗೆ ನೇಮಕ ಮಾಡಲಾಗುವುದು ಎಂದು ಡಿಎಫ್ಒ. ಬಾಲಚಂದ್ರ ತಿಳಿಸಿದರು.
ಸ್ಥಳೀಯ ಗ್ರಾಮಗಳ ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಕೋಣೆ ನಿರ್ಮಾಣ, ಶೌಚಗೃಹ ನಿರ್ಮಾಣ ಕುರಿತಂತೆ ಸಲ್ಲಿಕೆಯಾದ ಮನವಿಗೆ ಈ ಬಗ್ಗೆ ನರೇಗಾ ಯೋಜನೆಯಡಿ ಅಗತ್ಯ ಕ್ರಮ ಕೈಗೊಳ್ಳಲ್ಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ್ ಕಾಂದೂ ತಿಳಿಸಿದರು.
ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣ ಕುರಿತಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನು ಮಂಜೂರಾತಿ, ಸಾಗುವಳಿ ಭೂಮಿ ಮಂಜೂರು, ಕುಡಿಯುವ ನೀರು ಸಂಪರ್ಕ ಕಾಮಗಾರಿ ಕುರಿತಂತೆ ಮನವಿ ಸಲ್ಲಿಕೆಯಾದವು.
ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಮಗಾರಿ ಗಳ ಕ್ರಿಯಾ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ಪಡೆಯುವ ಮುನ್ನ ಕಾಮಗಾರಿ ಗಳ ಪಟ್ಟಿಯನ್ನು ಆರಣ್ಯ ಇಲಾಖೆಗೆ ಸಲ್ಲಿಸಿದ್ದಲ್ಲಿ ಸಕಾಲದಲ್ಲಿ ಅನುಮತಿ ನೀಡಲು ಪ್ರಯತ್ನಿಸಲಾಗುವುದು ಎಂದು ಡಿಎಫ್ ಒ ತಿಳಿಸಿದರು.
ಕಾಳಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿನ ಬೋಂಡೆಲಿ, ಕರಂಜೆ, ಬೋರ್ಗಳ್ಳಿ, ಕರ್ಸಿಂಗ್ಲಾ, ದೂದ್ ಮಾಲ್, ಸಿಸಾಯಿ, ಸಖವಾಡ, ಅಸ್ಸುಳ್ಳಿ, ಕಿಂದುಳೆ, ಬಿಸೊಸೆ, ಡೇರಿಯಾ ಮತ್ತಿತರ ಗ್ರಾಮಗಳ ಗ್ರಾಮಸ್ಥರು ಜನತಾ ದರ್ಶನದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಕರ್ನಾಟಕ ಗೋವಾ ರಾಜ್ಯದ ಗಡಿ ಭಾಗವಾದ ನಮ್ಮ ಗ್ರಾಮಕ್ಕೆ ಇದೇ ಪ್ರಥಮ ಬಾರಿಗೆ ಜಿಲ್ಲಾಧಿಕಾರಿ ಒಬ್ಬರು ಆಗಮಿಸಿ ತಮ್ಮ ಸಮಸ್ಯೆಗಳನ್ನು ಆಲಿಸಿರುವುದು ನಮಗೆಲ್ಲಾ ಸಂತಸ ತಂದಿದೆ ಎಂದು ಗ್ರಾಮಸ್ಥ ವಸಂತ ದೇಸಾಯಿ ಸಂತಸ ವ್ಯಕ್ತಪಡಿಸಿದರು
ಕಾಲ ಮಿತಿಯೊಳಗೆ ಸಮಸ್ಯೆ ಬಗೆಹರಿಸಲಾಗುವುದು
ಅಸ್ಸುಳ್ಳಿ ಮತ್ತು ಪಕ್ಕದ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಾದ ರಸ್ತೆ, ಸೇತುವೆ, ಕುಡಿಯುವ ನೀರು ಹಾಗೂ ವಸತಿ ಸಂಬಂಧಿತ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಜನಪರ ನಿರ್ಧಾರಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿ, ಜೋಯಿಡಾ ತಾಲೂಕಿನಲ್ಲಿ ಅರಣ್ಯ ಕಾಯಿದೆ ವ್ಯಾಪ್ತಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಬೇಕು, ಹಲವು ಅಭಿವೃದ್ಧಿ ಕಾಮಗಾರಿಗಳು ಅರಣ್ಯದ ಕಾರಣ ಅನುಷ್ಠಾನ ಮಾಡಲು ತೊಂದರೆಯಾಗಿದೆ. ಸ್ಥಳೀಯ ಯುವಕರಿಗೆ ಅರಣ್ಯ ಇಲಾಖೆಯ ಹುದ್ದೆಗಳ ನೇಮಕದಲ್ಲಿ ಆದ್ಯತೆ ನೀಡಬೇಕು. ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಜಲ ಜೀವನ್ ಮಿಷನ್ ಕಾಮಗಾರಿಗಳ ಸಮರ್ಪಕ ಅನುಷ್ಠಾನ ಆಗಬೇಕು, ಎಲ್ಲ ಗ್ರಾಮಗಳಿಗೆ ಅಗತ್ಯ ಬಸ್ ಸೌಲಭ್ಯ ಒದಗಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ರಾಜಪೂತ, ಡಿಎಫ್‌ಒ ಬಾಲಚಂದ್ರ, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿಹಾಜರಿದ್ದರು. ಜನತಾ ದರ್ಶನದಲ್ಲಿ ಸುಮಾರು 100 ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾದವು. ಆರೋಗ್ಯ ಇಲಾಖೆ ಮೂಲಕ ಉಚಿತ ಆರೋಗ್ಯ ತಪಾಸಣೆ, ಕನ್ನಡಕ ವಿತರಣೆ ಆಯೋಜಿಸಲಾಗಿತ್ತು.
ಅಸ್ಸುಳ್ಳಿ ಗ್ರಾಮಸ್ಥರು ಹಲವು ದಶಕಗಳಿಂದ ಎದುರಿಸುತ್ತಿದ್ದ ಪಡಿತರ ಪಡೆಯುವ ಕುರಿತ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಒಂದೇ ನಿಮಿಷದಲ್ಲಿ ಬಗೆಹರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.
ಗ್ರಾಮದಲ್ಲಿ ಪಡಿತರ ವಿತರಣೆ ಮಾಡುವ ಅಂಗಡಿ ಮಂಜೂರು ಮಾಡುವಂತೆ ಗ್ರಾಮಸ್ಥರು ಸಲ್ಲಿಸಿದ ಮನವಿ ಆಲಿಸಿದ ಜಿಲ್ಲಾಧಿಕಾರಿ ಕೂಡಲೇ ಈ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವ ಕುರಿತಂತೆ ನೋಟಿಫಿಕೇಶನ್ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಗ್ರಾಮದಲ್ಲಿ ಯಾವುದೇ ಸಹಕಾರ ಸಂಘ ಇಲ್ಲ, ಇಂಟರ್ನೆಟ್ ಸಂಪರ್ಕ ಇಲ್ಲವಾಗಿದ್ದು, ನ್ಯಾಯಬೆಲೆ ಅಂಗಡಿ ತೆರೆಯಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಉತ್ತರಿಸಿದರು.
ಇದಕ್ಕೆ ಒಪ್ಪದ ಜಿಲ್ಲಾಧಿಕಾರಿಗಳು, ಸಹಕಾರ ಸಂಘಗಳು ಮಾತ್ರ ನ್ಯಾಯಬೆಲೆ ತೆರೆಯಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಸಹಕಾರ ಸಂಘಗಳು ಇಲ್ಲದ ಪ್ರದೇಶದಲ್ಲಿ ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸಹ ತೆರೆಯಬಹುದಾಗಿದೆ, ಅಗತ್ಯ ಇಂಟರ್ನೆಟ್ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಆದ್ದರಿಂದ ತಕ್ಷಣ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸುವಂತೆ ನಿರ್ದೇಶನ ನೀಡಿದರು.
ಸಂಪೂರ್ಣ ಕಾಡಿನಿಂದ ಆವೃತ್ತವಾಗಿದ್ದು, ಯಾವುದೇ ಬಸ್ ಸೌಲಭ್ಯ ಸಹ ಇಲ್ಲದ ಇಲ್ಲಿನ ಗ್ರಾಮಸ್ಥರು ಪ್ರತಿ ತಿಂಗಳು ಪಡಿತರ ಪಡೆಯಲು 30 ಕಿಮೀ ದೂರ ಕ್ರಮಿಸಬೇಕಿತ್ತು. ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸುವಾಗ ಇಲ್ಲಿನ ಗ್ರಾಮದ ರಸ್ತೆಯ ಸಂಪೂರ್ಣ ಚಿತ್ರಣ ಖುದ್ದು ಕಂಡಿದ್ದ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಸಮಸ್ಯೆಯನ್ನು ತಕ್ಷಣ ಅರಿತು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದರು.
ಇದನ್ನೂ ಓದಿ