ಬನವಾಸಿಯಲ್ಲಿ ಕಸ ಗುಡಿಸಿದ ಜಿಲ್ಲಾಧಿಕಾರಿ

Road-Cleaning
Published on

ಶಿರಸಿ:ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಬುಧವಾರ ರಾತ್ರಿ ಬನವಾಸಿಯಲ್ಲಿ ವಾಸ್ತವ್ಯ ಹೂಡಿ ಗುರುವಾರ ಬೆಳಗ್ಗೆ ಬನವಾಸಿಯ ಬೀದಿಗಳನ್ನು ಸ್ವಚ್ಛ ಮಾಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮ ಬನವಾಸಿಯಲ್ಲಿ ಆಯೋಜನೆಯಾಗಿತ್ತು. ಮಧ್ಯಾಹ್ನದಿಂದ ರಾತ್ರಿವರೆಗೂ ನಡೆಯಿತು. ಹಾಗಾಗಿ ಅವರು ರಾತ್ರಿ ಅಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಾಮೂಹಿಕವಾಗಿ ಭೋಜನ ಸ್ವೀಕರಿಸಿ, ಬನವಾಸಿಯಲ್ಲಿಯೇ ವಾಸ್ತವ್ಯ ಮಾಡಿದರು.
ಗುರುವಾರ ಬೆಳಗ್ಗೆ 7 ಗಂಟೆಯಿಂದ 1 ತಾಸು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಪೊರಕೆ ಹಿಡಿದು ಬನವಾಸಿಯ ಬಸ್ ನಿಲ್ದಾಣದ ಸುತ್ತಲಿನ ರಸ್ತೆಗಳನ್ನು ಸ್ವಚ್ಛ ಮಾಡಿದರು. ನಂತರ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿದರು. ಸಮೀಪದ ಎಸ್‌ಸಿ ಕಾಲನಿಗೆ ತೆರಳಿ ಸಾರ್ವಜನಿಕರ ಯೋಗಕ್ಷೇಮ ವಿಚಾರಿಸಿದರು. ನಂತರ ಎನ್‌ಡಬ್ಲುಕೆಆರ್‌ಟಿಸಿ ಬಸ್‌ನಲ್ಲಿಯೇ ಎಲ್ಲ ಅಧಿಕಾರಿಗಳ ತಂಡದ ಜತೆಗೆ ವಾಪಸಾದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಎಸಿ ದೇವರಾಜ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅಜ್ಜಪ್ಪ ಸೊಗಲದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ.ಹುಲಿಗೆಮ್ಮ ಕುನನೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net