ಚುನಾವಣಾ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆ ಮೂಲ ಸೌಕರ್ಯ ಕಲ್ಪಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Dc Elecation Meeting mandya
Published on

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಏ.26ರಂದು ಮತದಾನ ನಡೆಯಲಿದೆ. ಅದರಂತೆ 25ರಂದು ರಾತ್ರಿ ಪಿ.ಆರ್‌ಒ, ಎ.ಪಿ.ಆರ್.ಒ ಹಾಗೂ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಮತದಾನ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಅವರಿಗೆ ಮೂಲ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು, ಶೌಚಗೃಹ, ವಿದ್ಯುತ್ ದೀಪ ಹಾಗೂ ಇನ್ನಿತರೆ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ತಿಳಿಸಿದರು.

ಬಿಸಿಲಿನ ತಾಪ ಹೆಚ್ಚಿದ್ದು, ಒಆರ್‌ಎಸ್ ಸೇರಿದಂತೆ ವಿವಿಧ ಅವಶ್ಯಕ ಔಷಧಗಳುಳ್ಳ ಮೆಡಿಕಲ್ ಕಿಟ್‌ಗಳನ್ನು ಆರೋಗ್ಯ ಇಲಾಖೆ ವತಿಯಿಂದ ಒದಗಿಸಲಾಗುವುದು. ಕ್ಲಸ್ಟರ್ ಮತಗಟ್ಟೆ ಇರುವ ಕಡೆ ಸಮುದಾಯ ಆರೋಗ್ಯಾಧಿಕಾರಿ ಹಾಗೂ ಉಳಿದ ಕಡೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಆಗಮಿಸುವ ಮತದಾರರಿಗೆ ಹೆಚ್ಚು ಜನ ಸರದಿ ಸಾಲಿನಲ್ಲಿ ಕಾಯುವವರಿಗೆ ನೆರಳಿನ ವ್ಯವಸ್ಥೆಯಾಗಬೇಕು. ಶಾಲೆಗಳಲ್ಲಿ ಕೊಠಡಿ ಇರುವ ಕಡೆ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಮಾಡಿ. ಕೊಠಡಿ ಇಲ್ಲದ ಸ್ಥಳಗಳಲ್ಲಿ ಶಾಮಿಯಾನದ ವ್ಯವಸ್ಥೆ ಮಾಡಿ ಎಂದರು.

ಪ್ರತಿ ಮತಗಟ್ಟೆಯಲ್ಲಿ ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ವೀಲ್‌ಚೇರ್ ವ್ಯವಸ್ಥೆ,  ತಮ್ಮ ಮನೆಯಿಂದ ಮತಗಟ್ಟೆಗೆ ಆಗಮಿಸಲು ವಾಹನದ ವ್ಯವಸ್ಥೆ ಬೇಕಿದ್ದಲ್ಲಿ ಮುಂಚಿತವಾಗಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು. ವ್ಯವಸ್ಥೆಗಳ ಬಗ್ಗೆ ಸಕ್ಷಮ್ ಆ್ಯಪ್‌ನಲ್ಲಿ  ತಿಳಿದುಕೊಳ್ಳಬಹುದು. ಮತಗಟ್ಟೆ ಅಧಿಕಾರಿಗಳಿಗೆ ಮತಗಟ್ಟೆಯಲ್ಲಿ ಊಟ, ಉಪಹಾರದ ವ್ಯವಸ್ಥೆ ನಿಗದಿಪಡಿಸಿರುವ ಸಮಯಕ್ಕೆ ಆಗಬೇಕು. ಅವರು ಆಹಾರ ಸೇವಿಸಲು ಹೊರಗೆ ಹೋಗಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ ಮಾತನಾಡಿ, ಗ್ರಾಮ ಪಂಚಾಯತಿ ಅಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆಯವರು ಸಮನ್ವಯವಾಗಿ ಕಾರ್ಯನಿರ್ವಹಿಸಲು ಯೋಜನೆ ರೂಪಿಸಿ ಮತಗಟ್ಟೆಗಳಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಿ ಎಂದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಬಾಬು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net