ಚೆಕ್‌ಫೋಸ್ಟ್ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಸೂಚನೆ

DC Election Meeting mandya
Published on

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪ್ರಕಟವಾದ ತಕ್ಷಣ ಚೆಕ್‌ಫೋಸ್ಟ್‌ಗಳ ಕಾರ್ಯನಿರ್ವಹಣೆ ಪ್ರಾರಂಭವಾಗಬೇಕಿದೆ. ಈ ಸಂಬಂಧ ಕೆಲಸ ಪ್ರಾರಂಭಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಚುನಾವಣೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮದ್ದೂರು ತಾಲೂಕಲ್ಲಿ 4, ಮಳವಳ್ಳಿಯಲ್ಲಿ 5, ಶ್ರೀರಂಗಪಟ್ಟಣದಲ್ಲಿ 5, ನಾಗಮಂಗಲದಲ್ಲಿ 4 ಹಾಗೂ ಕೆ.ಆರ್.ಪೇಟೆಯಲ್ಲಿ 3 ಸೇರಿದಂತೆ ಒಟ್ಟು 21 ಚೆಕ್‌ಫೋಸ್ಟ್ ನಿರ್ಮಿಸಲು ಯೋಜಿಸಲಾಗಿದೆ ಎಂದರು.

ಚೆಕ್‌ಫೋಸ್ಟ್‌ಗಳು ವಾಹನ ಸಂಚಾರಕ್ಕೆ ಅಡೆತಡೆ ಉಂಟುಮಾಡದಂತೆ ನಿರ್ಮಾಣವಾಗಬೇಕು. ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಬಿಸಿಲು ಹೆಚ್ಚಿರುವುದರಿಂದ ಉತ್ತಮ ಫ್ಯಾನ್ ವ್ಯವಸ್ಥೆ ಮಾಡಿ. ಟೆಂಟ್‌ಗಳ ಮೇಲೆ ಚೆಕ್‌ಫೋಸ್ಟ್ ಹೆಸರು, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮೊಬೈಲ್ ಸಂಖ್ಯೆ, ಆದಾಯ ತೆರಿಗೆ ಹಾಗೂ ವಾಣಿಜ್ಯ ತೆರಿಗೆ ನೋಡಲ್ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ ಎಂದು ಹೇಳಿದರು.

ಚೆಕ್‌ಫೋಸ್ಟ್ ನಿರ್ಮಾಣ ಸಂದರ್ಭದಲ್ಲಿ ಆಯಾ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿ, ಪೊಲೀಸ್ ಅಧಿಕಾರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಒಟ್ಟಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಗುರುತಿನ ಚೀಟಿ ನೀಡಬೇಕು. ಅಬಕಾರಿ ಇಲಾಖೆ ಅವರು ಸನ್ನದ್ದುಗಳಲ್ಲಿ ಇರುವ ಸ್ಟಾಕ್ ಪರಿಶೀಲಿಸಬೇಕು. ಕಳೆದ ಮೂರು ತಿಂಗಳಲ್ಲಿ ಸ್ಟಾಕ್‌ನಲ್ಲಿ ಏರಿಳಿತವಾಗಿದ್ದಲ್ಲಿ ವರದಿ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಬಕಾರಿ ಇಲಾಖೆ ಅಧಿಕಾರಿ ರವಿಶಂಕರ್, ಪಿಡಬ್ಲುೃಡಿ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಚುನಾವಣಾ ತಹಸೀಲ್ದಾರ್ ವೆಂಕಟಾಚಲಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net