

ಮಂಡ್ಯ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಚಿಹ್ನೆ ವಿತರಣೆ ಮಾಡುವ ವೇಳೆ ಚುನಾವಣಾ ಆಯೋಗ ನೀಡಿರುವ ಸೂಚನೆಯನ್ನು ತಪ್ಪದೇ ಪಾಲಿಸಬೇಕು. ಪ್ರಕ್ರಿಯೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಕರ್ತವ್ಯನಿರತ ಅಧಿಕಾರಿ ಮತ್ತು ಸಿಬ್ಬಂದಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮತಗಟ್ಟೆ ಅಧಿಕಾರಿಗಳಿಗೆ ಅಂಚೆ ಮತದಾನಕ್ಕೆ ಸ್ಥಾಪಿಸಲಾಗುವ ಮತಕೇಂದ್ರದಲ್ಲಿ ಮತ ಚಲಾಯಿಸಲು ಮೇ 2, 3 ಹಾಗೂ 4ರಂದು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಗತ್ಯ ಸೇವಾ ವಲಯದಡಿ ಈಗಾಗಲೇ 12ಡಿ ಸಲ್ಲಿಸಿರುವವರಿಗೆ ಮತ ಚಲಾಯಿಸಲು ತಾಲೂಕು ಕಚೇರಿ/ಚುನಾವಣಾಧಿಕಾರಿ ಕಚೇರಿಯಲ್ಲಿ ಅಂಚೆ ಮತಪತ್ರದ ಮತಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. 80 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ಮನೆ ಮನೆಗೆ ಮತಪತ್ರ ನೀಡಿ ಅಂಚೆ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು. ವಿವರವನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುವುದು ಎಂದರು.
80 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರ ಅಂಚೆ ಮತದಾನದಲ್ಲಿ ಭಾಗವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ, ವಿಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿಯ ತಂಡ ರಚಿಸಿ ಪ್ರತ್ಯೇಕವಾಗಿ ಕಚೇರಿ ಆದೇಶ ನೀಡಿ. ಆದೇಶ ಹಾಗೂ ವೇಳಾಪಟ್ಟಿಯ ವಿವರವನ್ನು ಅಭ್ಯರ್ಥಿಗಳಿಗೆ ಒದಗಿಸಿ ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅಂಚೆ ಮತದಾನದ ಮೂಲಕ ಮತ ಮಾಡುವವರಿಗೆ ಯಾವ ರೀತಿ ಮತ ಮಾಡಬೇಕು ಎಂಬ ವಿವರವನ್ನು ಅನಾವರಣಗೊಳಿಸಿ. ಜಿಲ್ಲೆಯಲ್ಲಿ ಅಂದಾಜು 5000 ಅಧಿಕಾರಿ/ನೌಕರರು ಇದ್ದು, ಅಂಚೆ ಮತದಾನ ಮಾಡಲು ಹೆಚ್ಚಿನ ಸಮಯ ಬೇಕಿದೆ. ತರಬೇತಿ ಸ್ಥಳದಲ್ಲಿ ಹೆಚ್ಚಿನ ಕೊಠಡಿಗಳ ವ್ಯವಸ್ಥೆ ಮಾಡಿ. ಮತದಾರರಿಗೆ ವೋಟರ್ ಸ್ಲಿಪ್ ನೀಡಲು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸರಿಯಾಗಿ ಮತದಾರರ ಮನೆಗೆ ನಿಯೋಜಿತ ಸಿಬ್ಬಂದಿ ತಲುಪಿಸುವಂತೆ ನೋಡಿಕೊಳ್ಳಿ ಎಂದರು.
ಚುನಾವಣಾಧಿಕಾರಿಗಳಾದ ಎಚ್.ಎಸ್.ಕೀರ್ತನಾ, ಕೃಷ್ಣಕುಮಾರ್, ನಾಗರಾಜು, ಅಲಿ ಅಕ್ರಂ ಷಾ, ವಿಕ್ರಂರಾಜೇಅರಸ್, ಮಲ್ಲಿಕಾರ್ಜುನ್, ಬಾಬು ಇತರರಿದ್ದರು.
ಇದೇ ವೇಳೆ ಅಂಚೆ ಮತಪತ್ರ ಮುದ್ರಣ, ವಿತರಣೆ ಹಾಗೂ ಮತದಾನ ಕೇಂದ್ರ ಸ್ಥಾಪನೆ, ಎರಡನೇ ಹಂತದ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ, ಮತದಾನದ ದಿನದಂದು ಅಂಕಿ ಅಂಶಗಳ ಸಂಗ್ರಹಣೆ, ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಕುರಿತಂತೆ ತರಬೇತಿ ನೀಡಲಾಯಿತು.