ಭಗಂಡೇಶ್ವರ-ತಲಕಾವೇರಿ ದೇವಾಲಯ ಇ-ಪ್ರಸಾದಕ್ಕೆ ಡಿಸಿ ಚಾಲನೆ

MDK03
Published on

ಮಡಿಕೇರಿ: ಪುಣ್ಯಕ್ಷೇತ್ರ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯ ಮತ್ತು ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಪವಿತ್ರ ಕ್ಷೇತ್ರಗಳ ಇ-ಪ್ರಸಾದ ಮತ್ತು ತೀರ್ಥ ವಿತರಣೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೋಮವಾರ ಚಾಲನೆ ನೀಡಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇ-ಪ್ರಸಾದಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಧತ್ತಿ ಇಲಾಖೆಯಿಂದ ಅಂಚೆ ಕಚೇರಿ ಮೂಲಕ ಇ-ಪ್ರಸಾದವನ್ನು www.indiapost.gov.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮತ್ತು ಸಹಾಯವಾಣಿ ೧೮೦೦೨೬೬೬೮೬೮ ಬುಕ್ ಮಾಡಿ ೩೦೦ ರೂ. ಪಾವತಿಸಿದಲ್ಲಿ ಇ-ಪ್ರಸಾದವನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಇ-ಪ್ರಸಾದದಲ್ಲಿ ಕಾವೇರಿ ತೀರ್ಥ, ಪಂಚಕಜ್ಜಾಯ, ಕುಂಕುಮ, ಶ್ರೀಗಂಧ ಇರಲಿದೆ. ಭಕ್ತಾಧಿಗಳ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಸಾದ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.


ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ಅಂಚೆ ಕಚೇರಿಯ ವ್ಯವಸ್ಥಾಪಕ ರಮೇಶ್ ಬಾಬು, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದೊರೆ, ದೇವಾಲಯದ ಪಾರುಪತ್ತೆಗಾರರಾದ ಕೆ.ಟಿ.ಪೊನ್ನಣ್ಣ, ಮಹೇಶ್ ಮತ್ತು ಪುನೀತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net