ಮೆರವಣಿಗೆಯಲ್ಲಿ ಸ್ಥಳೀಯ ತಂಡಕ್ಕೆ ಆದ್ಯತೆ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

DC Dr. Kumara meeting Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೂ ಆದ್ಯತೆ ನೀಡುವುದರಿಂದ ವಿವಿಧ ಕಲಾ ಪ್ರಕಾರವನ್ನು ತಿಳಿಸಬಹುದು. ಆದ್ದರಿಂದ ಇಡೀ ಜಿಲ್ಲೆ ಹಾಗೂ ರಾಜ್ಯದ ಕಲಾ ತಂಡಗಳಿಗೆ ಅವಕಾಶ ನೀಡಲಾಗುವುದು. ಅಂತೆಯೇ ಮೆರವಣಿಗೆಯಲ್ಲಿ ಸ್ಥಳೀಯ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನದ 3 ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ 1 ಮುಖ್ಯ ವೇದಿಕೆ ಹಾಗೂ 2 ಸಮಾನಾಂತರ ವೇದಿಕೆ ಇರಲಿದೆ. ಆದ್ದರಿಂದ ಕ್ರಿಯಾಯೋಜನೆ ತಯಾರಿಸಿ ಅಂದಾಜು ಮೊತ್ತವನ್ನು ನೀಡಬೇಕು ಎಂದರು.

ಸಾಂಸ್ಕೃತಿಕ ಹಾಗೂ ಮೆರವಣಿಗೆ ಸಮಿತಿಯಲ್ಲಿ ಸದಸ್ಯರು ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯದ ಕಲಾವಿದರಿಗೆ ಆದ್ಯತೆ ನೀಡುವಂತೆ ಇರಬೇಕು. ಡೊಳ್ಳುಕುಣಿತ ಎಂದ ಕೂಡಲೇ ಇದು ಕೇವಲ ಒಂದು ಸ್ಥಳ ಅಥವಾ ಒಂದು ಸಂಘಕ್ಕೆ ಸೀಮಿತವಾಗಬಾರದು. ಈ ಕಲೆಯಲ್ಲಿರುವ ಎಲ್ಲರನ್ನೂ ಒಗ್ಗೂಡಿಸಿ ತಂಡ ರಚಿಸಬೇಕು. ಸ್ಮರಣಾ ಸಂಚಿಕೆ ಸ್ಮರಣಾ ಸಂಚಿಕೆಯನ್ನು ಸಾಹಿತ್ಯ ಸಮ್ಮೇಳನ ನಡೆಯುವ 3 ದಿನದ ಅವಧಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಿ. ಇದು ಉತ್ತಮವಾಗಿ ಮೂಡಿಬರಲು ಕನ್ನಡ ನಾಡು, ನುಡಿ, ಕಲೆಯ ಬಗ್ಗೆ ಲೇಖನಗಳನ್ನು ಸಂಗ್ರಹಿಸಿ. ಅದು ವಿಷಯಾಧಾರಿತವಾಗಿರಲಿ. ಹೊರ ರಾಜ್ಯ ಹಾಗೂ ಜಿಲ್ಲೆಯವರಿಗೆ ಮಾಹಿತಿ ನೀಡಿ ಸಂಗ್ರಹಿಸಿ. ಉತ್ತಮ ಗುಣಮಟ್ಟವಿರುವ ಲೇಖನಗಳನ್ನು ಆಯ್ಕೆ ಮಾಡಿ ಎಂದು ಸೂಚನೆ ನೀಡಿದರು.

ಪ್ರತಿದಿನ ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆದ್ದರಿಂದ ಆರೋಗ್ಯ ಮತ್ತು ಸ್ವಚ್ಛತಾ ಸಮಿತಿಯಿಂದ ಸ್ವಚ್ಛತೆಗೆ ಬೇಕಿರುವ ತಂಡಗಳನ್ನು ರಚಿಸಿಕೊಳ್ಳಿ. ಪಾರ್ಕಿಂಗ್, ವೇದಿಕೆ, ಆಹಾರ ಕೌಂಟರ್ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜಿಸಿಕೊಳ್ಳಬೇಕಿರುತ್ತದೆ. ಇದಕ್ಕೆ ಸ್ವಯಂ ಸೇವಕರು ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತಂಡ ರಚಿಸಿ ಈಗಿನಿಂದಲೇ ಅವರಿಗೆ ತರಬೇತಿ ನೀಡಿ. ಇದಲ್ಲದೆ ತಾತ್ಕಾಲಿಕ ಆಸ್ಪತ್ರೆ ತೆರೆದು ವೈದ್ಯರು ಹಾಗೂ ಇನ್ನಿತರೆ ಸಿಬ್ಬಂದಿ ನಿಯೋಜಿಸಿಕೊಳ್ಳಿ. ಔಷಧ ಹಾಗೂ ಬೇಕಿರುವ ಇನ್ನಿತರೆ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳಿ. ಆಹಾರ ತಯಾರಿಕೆ ಸ್ಥಳದಲ್ಲಿ ಹೆಚ್ಚಿನ ಆಹಾರ ಸುರಕ್ಷತಾ ಅಧಿಕಾರಿಗಳ ಅವಶ್ಯಕತೆ ಇದ್ದು, ನಿಯೋಜಿಸಿಕೊಳ್ಳಲು ಕೇಂದ್ರ ಕಚೇರಿಗೆ ಪತ್ರ ಬರೆಯಿರಿ. ಅಂತೆಯೇ ತಾತ್ಕಾಲಿಕ ಶೌಚಗೃಹ ತೆರೆಯಲು ಯೋಜನೆ ರೂಪಿಸಿಕೊಳ್ಳಿ. ಒಟ್ಟಾರೆ ಸಮಿತಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಎಲ್ಲ ಸದಸ್ಯರು ಸಕ್ರಿಯವಾಗಿ ಸಭೆಗಳಲ್ಲಿ ಪಾಲ್ಗೊಳ್ಳಿ. ಕಾರ್ಯಕ್ರಮಗಳು ಉತ್ತಮವಾಗಿ ಮೂಡಿ ಬರಲು ಸಮಿತಿಯ ಸದಸ್ಯ ಕಾರ್ಯದರ್ಶಿ ತಮ್ಮ ಹಂತದಲ್ಲಿ ಸಭೆಗಳನ್ನು ನಡೆಸಿ ಕಾರ್ಯ ಯೋಜನೆಗಳನ್ನು ರೂಪಿಸಿ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಿರುವುದರಿಂದ ವಿಭಿನ್ನ ಕಲಾ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಎಲ್ಲ ಕಲಾ ಪ್ರಕಾರಗಳಿಗೂ ಅವಕಾಶ ನೀಡುವುದು ಮುಖ್ಯವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1 ದಿನಕ್ಕೆ ಎಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದೆಂದು ಸಮಿತಿಯಲ್ಲಿ ಚರ್ಚಿಸಿ, ಸಮಯವನ್ನು ನಿಗದಿಪಡಿಸಿ. ಇನ್ನು ಪ್ರತಿ ಕಡೆ ವೈದ್ಯರನ್ನೊಳಗೊಂಡ ಯುನಿಟ್ ರಚಿಸಿ. ಚಿಕ್ಕ ಅಂಬ್ಯೂಲೆನ್ಸ್‌ಗಳನ್ನು ನಿಯೋಜನೆ ಮಾಡಿಕೊಳ್ಳಿ. ಖಾಸಗಿ ಆಸ್ಪತ್ರೆಯವರಿಗೆ ಸಹ ಪತ್ರ ಬರೆದು ಅವರನ್ನು ಸಹ 3 ದಿನಗಳನ್ನು ನಿಯೋಜಿಸಿಕೊಡುವಂತೆ ಮನವಿ ಮಾಡಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮ್ಮೇಳನದ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ವಿವಿಧ ಸಮಿತಿಯ ಪ್ರೊ.ಎಚ್.ಎಸ್.ಮುದ್ದೇಗೌಡ, ತೈಲೂರು ವೆಂಕಟಕೃಷ್ಣ, ಮಾ.ರಾಮಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net