ಕುದುರೆ ಮುಖ ಕಬ್ಬಿಣದ ಅದಿರು ಸಂಸ್ಥೆಗೆ ದ.ಕ ಜಿಲ್ಲಾಧಿಕಾರಿ ಭೇಟಿ

MNG-August 16-KIOCL
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಂಗಳವಾರ ಪಣಂಬೂರಿನ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಗೆ ಭೇಟಿ ನೀಡಿದರು.
ಸಂಸ್ಥೆ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕ ಟಿ.ಸಾಮಿನಾಥನ್ ಸಂಸ್ಥೆಯ ಪೆಲೆಟ್ ಘಟಕದ ಕಾರ್ಯವಿಧಾನದ ಕುರಿತು ವಿವರಿಸಿದರು. ಈ ವೇಳೆ ಅವರು ಸಿಐಎಸ್‌ಎಫ್ (ಅಗ್ನಿಶಾಮಕ) ಸಿಬ್ಬಂದಿಗಾಗಿ ಹೊಸದಾಗಿ ಖರೀದಿಸಲಾದ ಅಗ್ನಿಶಾಮಕ ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.
ನಂತರ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕೆಐಒಸಿಎಲ್ ವತಿಯಿಂದ ರೆಡ್‌ಕ್ರಾಸ್ ಸೊಸೈಟಿ ಕಟ್ಟಡ ನಿರ್ಮಾಣಕ್ಕೆ ಸೊಸೈಟಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರಿಗೆ 15 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ವಿಜಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆಐಒಸಿಎಲ್ ಸಿದ್ಧಪಡಿಸಿರುವ ‘ವಿಪತ್ತು ನಿರ್ವಹಣಾ ಕೈಪಿಡಿ‘ಯನ್ನು ಅವರು ಬಿಡುಗಡೆಗೊಳಿಸಿದರು. ಸಿಎಸ್‌ಆರ್ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ಕಂಪ್ಯೂಟರ್ ಹಸ್ತಾಂತರ ಮಾಡಲಾಯಿತು.
ನಿರ್ದೇಶಕ (ಉತ್ಪಾದನೆ ಹಾಗೂ ಯೋಜನೆಗಳು) ಕೆ.ವಿ.ಭಾಸ್ಕರ ರೆಡ್ಡಿ, ಕಂಪನಿಯ ಹಿರಿಯ ಅಧಿಕಾರಿಗಳು, ಕಂಪನಿಯ ಒಕ್ಕೂಟಗಳು ಮತ್ತು ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸೀನಿಯರ್ ಮ್ಯಾನೇಜರ್ ಎಸ್.ಮುರುಗೇಶ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net