

ಮುಳಬಾಗಿಲು : ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಭಾನುವಾರ ಬೆಳ್ಳಂಬೆಳಗ್ಗೆ ಮುಳಬಾಗಿಲಿಗೆ ಆಗಮಿಸಿ ನಗರಸಭೆ ಕಾರ್ಯಾಲಯದ ಪರಿಸರದ ಸ್ವಚ್ಛತೆ ಪರಿಶೀಲಿಸಿ, ನಂತರ ಸೈಕಲ್ನಲ್ಲೇ ನಗರ ಸಂಚಾರ ಮಾಡಿ ಸಮಸ್ಯೆಗಳನ್ನು ಅವಲೋಕಿಸಿದರು.
ಮುಳಬಾಗಿಲಿಗೆ ಜಿಲ್ಲಾಧಿಕಾರಿ ಭೇಟಿ ಕಾರ್ಯಕ್ರಮ ನಿಗದಿಯಾಗುತ್ತಿದ್ದಂತೆ ನಗರಸಭೆಯಿಂದ ಬೆಳಗ್ಗೆ, ಸಂಜೆ ಎರಡು ಪಾಳೆಯಲ್ಲೂ ಸ್ವಚ್ಛತೆ ಕಾರ್ಯಗಳು ಆರಂಭಗೊಂಡಿದ್ದು, ನಗರದ ಬಸ್ ನಿಲ್ದಾಣ ರಸ್ತೆ, ತಾಲೂಕು ಕಚೇರಿ ರಸ್ತೆ, ಎಂ.ಸಿ.ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳಿಗೆ ಶನಿವಾರ ಬೆಳಗ್ಗೆ ಪಿಡಬ್ಲ್ಯುಡಿ ಇಲಾಖೆಯಿಂದ ಜೆಲ್ಲಿ ಮಿಶ್ರಿತ ಧೂಳು ಹಾಕಿ ಸಮತಟ್ಟು ಮಾಡಿ ಡಿಸಿ ಅವರ ಸೈಕಲ್ ಯಾತ್ರೆ ಸುಗಮವಾಗಿ ಸಾಗುವಂತೆ ನೋಡಿಕೊಂಡಿದ್ದು ಕಂಡು ಬಂತು. ಈ ಮೂಲಕ ಒಂದು ವಾರದ ಮಟ್ಟಿಗೆ ಹಳ್ಳಗಳ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಂತಾಗಿದೆ.
ಭಾನುವಾರ ಬೆಳಗ್ಗೆ ಅಂಬೇಡ್ಕರ್ ವೃತ್ತದಿಂದ ಸೈಕಲ್ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಚಾಚಾ ನೆಹರು ಉದ್ಯಾನವನಕ್ಕೆ ಭೇಟಿ ನೀಡಿ ಬೆಳಗ್ಗೆ ವಾಯುವಿಹಾರಿಗಳ ಜತೆಗೆ ಕೆಲಕಾಲ ಉದ್ಯಾನವನ ಸ್ವಚ್ಛತೆ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಿದರು.
ಸೈಕಲ್ ಜಾಥಾ ಮೂಲಕ ಸ್ವಚ್ಛತಾ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಜಿಲ್ಲಾಧಿಕಾರಿ ಡಾ.ರವಿ ಮಾತನಾಡಿ, ಮುಳಬಾಗಿಲು ನಗರ ಬಹುತೇಕ ಸ್ವಚ್ಛವಾಗಿದೆ. ಈ ಬಗ್ಗೆ ನಗರಸಭೆಯ ಪಾತ್ರ ಶ್ಲಾಘನೀಯ ಹಾಗೂ ಸಮಾಧಾನ ತಂದಿದೆ. ಕೆಲ ಸ್ಥಳಗಳಲ್ಲಿ ಸ್ವಚ್ಛತೆಯ ಅಗತ್ಯವಿದೆ. ಇದರಲ್ಲಿ ಸಾರ್ವಜನಿಕರು ಸಹ ನಗರಸಭೆಯ ಜತೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೆಂಕಟಾಚಲಪತಿ, ಕಂದಾಯ ಅಧಿಕಾರಿ ನಾರಾಯಣ, ಪರಿಸರ ಇಂಜಿನಿಯರ್ ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಕಿ ವಿ.ಪ್ರತಿಭಾ ಇದ್ದರು.
ಕಟ್ಟುನಿಟ್ಟಿನ ಸೂಚನೆ -ಆಂಜನೇಯ ಸ್ವಾಮಿ ದೇವಾಲಯದ ಸುತ್ತಮುತ್ತಲ ಪರಿಸರಕ್ಕೆ ಧಕ್ಕೆ ಆಗುವಂತಹ ಅಂಗಡಿ ಮುಂಗಟ್ಟುಗಳು ಹೋಟೆಲ್ಗಳು ಇರಬಾರದು. ಭಕ್ತರಿಗೆ ಸಂಬಂಧಿಸಿದ ಪೂಜಾ ಸಾಮಗ್ರಿಗಳು ಮತ್ತು ವಸ್ತುಗಳ ಮಾರಾಟಕ್ಕೆ ಅವಕಾಶ ಇರಬೇಕು. -ಅಗ್ರಹಾರದ ವಿಠಲಕುಂಟೆ ಅಭಿವೃದ್ಧಿ ಬಗ್ಗೆ ರ್ನಿಲಕ್ಷ$್ಯ ವಹಿಸಿರುವುದು ಸರಿಯಲ್ಲ. ತಕ್ಷಣ ನಗರಸಭೆಯಿಂದ ಸರಿಪಡಿಸಬೇಕು ಎಂದು ಸೂಚಿಸಿದರು. -ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಗೃಹಗಳು ಇರಬೇಕು. ಇದನ್ನು ನಗರಸಭೆ ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ನಿರ್ದೇಶಿಸಿದರು. -ನಗರದಲ್ಲಿ ಸಿಸಿ ಕ್ಯಾಮರಾಗಳ ಕಾರ್ಯಾಚರಣೆ ಸಕ್ರಮವಾಗಿರಬೇಕು. ಅವಶ್ಯ ಇರುವೆಡೆ ಅಳವಡಿಸಬೇಕು. ಸಿಗ್ನಲ್ ದೀಪಗಳು ಚಾಲನೆಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.