

ಮಂಡ್ಯ: ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಪ್ರಕರಣವಿಲ್ಲ. ಆದರೆ, ಐಎಲ್ಐ, ಎಸ್‌ಎಆರ್‌ಐ ಲಕ್ಷಣ ಇರುವವರಿಗೆ ಕೋವಿಡ್ ಪರೀಕ್ಷೆಗಳನ್ನು ಮಾಡಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿ ಪೂರಕವಾಗಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. ಅಂತೆಯೇ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಹಿಂದೆ ಕೋವಿಡ್ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಇರುವುದರಿಂದ ಮಂಡ್ಯ ಮೆಡಿಕಲ್ ಕಾಲೇಜು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಬೆಡ್, ಆಕ್ಸಿಜನ್ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಪರಿಶೀಲನೆ ಮಾಡಬೇಕು. ಪ್ರತಿ ತಾಲೂಕಿನಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಮಾಡಬೇಕು. ಸಾರ್ವಜನಿಕರು ಸಹ ಸರ್ಕಾರದಿಂದ ಹೊರಡಿಸಲಾಗುವ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್. ಧನಂಜಯ ಮಾತನಾಡಿ, ಕೋವಿಡ್ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಸಂಗ್ರಹಿಸಲಾಗುವ ಮಾದರಿಗಳನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ತಲುಪಿಸಲಾಗುವುದು. ಕನಿಷ್ಠ 4 ಸಾವಿರ ಮಾದರಿಗಳನ್ನು ಪ್ರಯೋಗಶಾಲೆಯ ಪರೀಕ್ಷೆಗೆ ಒಳಪಡಿಸಬಹುದು. ಹೆಚ್ಚುವರಿ ಮಾದರಿಗಳು ಸಂಗ್ರಹವಾದಲ್ಲಿ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ನೀಡಿ ಪರೀಕ್ಷೆ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಆರೋಗ್ಯ ಇಲಾಖೆಯ ಡಾ.ರವೀಂದ್ರ, ಡಾ.ಮರೀಗೌಡ, ಡಾ.ಜವರೇಗೌಡ, ಡಾ.ಶಶಿಧರ್, ಡಾ.ಭವಾನಿಶಂಕರ್, ಡಾ.ಕೆ.ಪಿ. ಅಶ್ವಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.