

ಚಿಕ್ಕಮಗಳೂರು: ಕಲ್ಲು ಗಣಿಗಾರಿಕೆ ಸಂಬಂಧ ಜನರು ನೀಡಿರುವ ಅಹವಾಲು ಸಂಗ್ರಹಿಸಿ ಕಾನೂನಿನ ಅಡಿ ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.
ಕಡೂರು ತಾಲೂಕು ಬೀರನಹಳ್ಳಿ ಹಾಗೂ ಸಾದರಹಳ್ಳಿ ಗ್ರಾಮಗಳ ಒಟ್ಟು 15.788 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿ ವರ್ಷ 8.60 ಲಕ್ಷ ಟನ್ ಸಾಮರ್ಥ್ಯದ ಕಟ್ಟಡ ಕಲ್ಲು ಗಣಿಗಾರಿಕೆ ಉದ್ದಿಮೆ ನಡೆಸುವ ಸಂಬಂಧ ಬೀರನಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲ್ಲು ಗಣಿಗಾರಿಕೆ ಪರಿಸರಕ್ಕೆ ಹಾನಿಯಾಗುವಂತಹ ಕಾರ್ಯ. ಕಲ್ಲು ಗಣಿಗಾರಿಕೆ ನಡೆಸುವ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯನ್ನೇ ಅವಲಂಬಿಸಿದ್ದು ಈ ಭಾಗದಲ್ಲಿ ಗಣಿಗಾರಿಕೆ ನಡೆಸಿದಲ್ಲಿ ಹಲವು ಸಂಕಷ್ಟದೊಂದಿಗೆ ತೆಂಗು ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಲಿದೆ ಎಂದರು.
ಕರೊನಾದಿಂದ ಬೆಂಗಳೂರು ತೊರೆದು ಹಳ್ಳಿಗಳಿಗೆ ಬಂದಿರುವ ಹಾಗೂ ಕೃಷಿಯತ್ತ ಹೆಚ್ಚು ಗಮನ ಹರಿಸುತ್ತಿರುವ ಯುವ ಕೃಷಿಕರಿಗೆ ಕಲ್ಲುಕ್ವಾರಿ ಪ್ರಾರಂಭಿಸುವುದರಿಂದ ಹಲವು ತೊಂದರೆಗಳು ಎದುರಾಗಲಿವೆ. ಅಲ್ಲದೆ ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದರು.
ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ಆರಂಭಿಸುವ ಕುರಿತು ಕಾನೂನಿನ ಅಡಿಯಲ್ಲಿ ಗ್ರಾಮಸ್ಥರ ಅಭಿಪ್ರಾಯವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಜತೆಗೆ ಗ್ರಾಮಗಳ ಜನರ ಸುರಕ್ಷತೆಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಲ್ಲು ಗಣಿಗಾರಿಕೆ ಪ್ರಾರಂಭಿಸುವ ಭಾಗದಲ್ಲೇ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಹಾದುಹೋಗಲಿದ್ದು ಇದರಿಂದಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಧೂಳು ಸೇರಿ ಹಲವು ರೋಗ ರುಜಿನಗಳು ಹರಡುವ ಭೀತಿ ಇದೆ ಎಂಬುದರ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ಅಹವಾಲು ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ. ಕುಮಾರ್, ಹಿರಿಯ ಪರಿಸರ ಸಂರಕ್ಷಣಾಧಿಕಾರಿ ರಮೇಶ್ ನಾಯ್್ಕ ಸ್ಥಳೀಯ ಮುಖಂಡರು ಇತರರಿದ್ದರು.</