ಡಿಸಿ ಬದಲಾವಣೆ ಶಾಸಕರು ಸಕ್ಸಸ್​!

KLR
Published on

ಎನ್​.ಮುನಿವೆಂಕಟೇಗೌಡ, ಕೋಲಾರ

ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಅಕ್ರಂಪಾಷಾ ಅವರನ್ನು ವರ್ಗಾವಣೆ ಮಾಡಿಸಿ, ಡಾ.ಎಂ.ಆರ್​.ರವಿ ಅವರನ್ನು ನೂತನ ಡಿಸಿಯನ್ನಾಗಿ ನೇಮಿಸಿಕೊಂಡು ಬರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕೋಲಾರ, ಮಾಲೂರು ಶಾಸಕರು ಕಡೆಗೂ ಯಶಸ್ವಿಯಾಗಿದ್ದಾರೆ.

ಅಕ್ರಂಪಾಷಾ ಅವರನ್ನು ವರ್ಗಾವಣೆ ಮಾಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​, ಕೋಲಾರ ಶಾಸಕ ಕೊತ್ತೂರು ಮಂಜುನಾಥ್​, ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಎಂ.ಎಲ್​.ಸಿ.ಅನಿಲ್​ಕುಮಾರ್​ ಅವರು ಸಿಎಂ ಬಳಿ ತೆರಳಿ ಮನವಿ ಸಲ್ಲಿಸಿದ್ದು ಗುಟ್ಟಾಗೇನೂ ಇರಲಿಲ್ಲ. ತಿಂಗಳ ಹಿಂದೆಯೇ ಅಕ್ರಂಪಾಷಾ ಅವರ ವರ್ಗಾವಣೆ ಸದ್ದು ಕೇಳಿ ಬಂದಿತ್ತು.

ಇದರ ನಡುವೆ, ಹೊಸ ಜಿಲ್ಲಾಧಿಕಾರಿಯಾಗಿ ಕೋಲಾರಕ್ಕೆ ಯಾರನ್ನು ತರಬೇಕು ಎಂಬ ವಿಷಯದ ಬಗ್ಗೆ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯಲ್ಲಿ ಬಲಗೈ ಸಮುದಾಯದವರೇ ಹೆಚ್ಚಿದ್ದಾರೆ. ಅವರಿಗೆ ಪ್ರಾತಿನಿಧ್ಯ ದೊರೆತಿಲ್ಲ. ಆದ ಕಾರಣ ಬಲಗೈ ಸಮುದಾಯದ ಅಧಿಕಾರಿಯನ್ನೇ ತರಬೇಕು ಎಂಬ ವಾದ ಮುಂದಿಟ್ಟದ್ದರು. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಡಿಸಿಯಾಗಿದ್ದ ನಾಗರಾಜ್​ ಅವರನ್ನೇ ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂಬ ಬೇಡಿಕೆಯನ್ನೂ ಸರ್ಕಾರದ ಮಟ್ಟದಲ್ಲಿ ಮುಂದಿಟ್ಟಿದ್ದರು.

ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೋಲಾರ, ಮಾಲೂರು ಹಾಗೂ ಎಂಎಲ್​ಸಿಗಳು ಮಹಿಳಾ ಐಎಎಸ್​ ಅಧಿಕಾರಿಯೊಬ್ಬರ ಹೆಸರನ್ನು ಮುನ್ನೆಲೆಗೆ ತಂದಿದ್ದರು. ಇದರಿಂದ ಬೇಸರಗೊಂಡ ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ವಪಕ್ಷ ಶಾಸಕ ವಿರುದ್ಧ ಬಹಿರಂಗವಾಗಿಯೇ ಆರೋಪಿಸಿದ್ದರು.

ಇದರ ನಡುವೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್​ ಅಹ್ಮದ್​, ಅಕ್ರಂಪಾಷಾ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಡಿಸಿ ವರ್ಗಾವಣೆ ವಿಷಯ ತಟಸ್ಥವಾಗಿತ್ತು. ಆದರೆ, ಬುಧವಾರ ದಿಢೀರನೆ ವರ್ಗಾವಣೆ ಆದೇಶ ಹೊರಬಿದ್ದು, ಡಾ.ಎಂ.ಆರ್​.ರವಿ ನೂತನ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕೈ ಪಾಳಯದಲ್ಲಿ ಅಸಮಾಧಾನ

ಇತ್ತೀಚೆಗೆ ಜಿಲ್ಲೆಯ ಕಾಂಗ್ರೆಸ್​ ಶಾಸಕರಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಕೋಲಾರ ಡೇರಿ ವಿಷಯದಲ್ಲಿ ಎಸ್​.ಎನ್​.ನಾರಾಯಣಸ್ವಾಮಿ ಕೆಲವೊಂದು ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಕೋಲಾರದ ಕಡೆ ಮುಖ ಮಾಡುವುದನ್ನು ಮರೆತುಬಿಟ್ಟಿದ್ದಾರೆ ಎಂಬ ಆರೋಪಗಳೂ ಇವೆ. ಇದರ ನಡುವೆ ಡಿಸಿ ವರ್ಗಾವಣೆ ವಿಚಾರದಲ್ಲಿ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಪ್ರಯತ್ನಕ್ಕೆ ಹಿನ್ನಡೆಯಾಗಿರುವುದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ.

ಜಿಲ್ಲಾಧಿಕಾರಿ ವರ್ಗಾವಣೆ ವಿಷಯದಲ್ಲಿ ಸಮುದಾಯದವರ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಆದರೆ, ಎಸ್​.ಎನ್​.ನಾರಾಯಣಸ್ವಾಮಿ ವಿರುದ್ಧ ಕೆಲವು ಸಂಘ&ಸಂಸ್ಥೆಗಳು ಆರೋಪ ಮಾಡಿ, ಜಿಲ್ಲಾಧಿಕಾರಿ ವಿಷಯದಲ್ಲಿ ಸಮುದಾಯದವರನ್ನೇ ತರಬೇಕೆಂದು ಹೇಳುವುದು ಸರಿಯಲ್ಲ. ಅಧಿಕಾರಿ ವಿಷಯದಲ್ಲಿ ಜಾತಿ ರಾಜಕಾರಣ ಅಗತ್ಯವೆ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದವು.

"ಜಿಲ್ಲಾಧಿಕಾರಿ ವರ್ಗಾವಣೆ ವಿಷಯದಲ್ಲಿ ಕಾಂಗ್ರೆಸ್​ನ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡ ಇಲ್ಲ. ನಾನಂತೂ ಇಂಥವರೇ ಡಿಸಿಯಾಗಬೇಕು ಮತ್ತು ಹಿಂದಿನ ಜಿಲ್ಲಾಧಿಕಾರಿ ವರ್ಗಾವಣೆಯಾಗಬೇಕೆಂದು ಬೇಡಿಕೆ ಇಟ್ಟಿಲ್ಲ, ಒತ್ತಡವೂ ತಂದಿಲ್ಲ. ಸರ್ಕಾರವೇ ಡಿಸಿಯನ್ನು ವರ್ಗಾವಣೆ ಮಾಡಿದೆ."

 -ಎಂ.ಎಲ್​.ಸಿ. ಅನಿಲ್​ಕುಮಾರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net