

ಮಂಡ್ಯ: ಕ್ರಿಕೆಟ್ ಬೆಟ್ಟಿಂಗ್, ಜೂಜಾಟದಿಂದಾಗಿ ತಾಲೂಕಿನ ಹಳೇಬೂದನೂರು ಗ್ರಾಮದ ತ್ಯಾಗರಾಜು ಪ್ರಾಣ ಕಳೆದುಕೊಂಡ ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಇದಲ್ಲದೆ ವಿವಿಧ ಸಂಘಟನೆಗಳು ಪ್ರತಿಭಟನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ, ಬೆಟ್ಟಿಂಗ್ ಹಾಗೂ ಜೂಜಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ಕೊಡಲು ಸಹಾಯವಾಣಿ ಪ್ರಾರಂಭಿಸುವುದು ಸೇರಿದಂತೆ ಕೆಲ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ನ.1ರಂದು ತ್ಯಾಗರಾಜು ಆತ್ಮಹತ್ಯೆಗೆ ಶರಣಾಗಿದ್ದನು. ಇದರ ಬೆನ್ನಲ್ಲೇ ಸೋಮವಾರ ಕರುನಾಡ ಸೇವಕರು ಸಂಘಟನೆ ನೇತೃತ್ವದಲ್ಲಿ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳು ಜಿಲ್ಲಾ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು. ಮಾತ್ರವಲ್ಲದೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಸಂಘಟನೆಯ ಪದಾಧಿಕಾರಿಗಳೊಂದಿಗೆ ಡಿಸಿ ಹಾಗೂ ಎಸ್ಪಿ ತುರ್ತು ಸಭೆ ನಡೆಸಿ ಹಲವು ಮಾಹಿತಿ ಪಡೆದುಕೊಂಡರು.
ಮುಖ್ಯವಾಗಿ ಬೆಟ್ಟಿಂಗ್, ಜೂಜಾಟದ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರು ಹಿಂಜರಿಯುತ್ತಾರೆ. ಕಾರಣ ದಂಧೆಕೋರರ ಭಯ. ಈ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭಿಸಿ ದೂರು ಅಥವಾ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲು ತೀರ್ಮಾನಿಸಲಾಯಿತು. ಅದರಂತೆ ಶೀಘ್ರವೇ ಕ್ರಮ ವಹಿಸುವ ಭರವಸೆ ನೀಡಲಾಯಿತು.
ಇನ್ನು ಕ್ರಿಕೆಟ್ ಬೆಟ್ಟಿಂಗ್, ಜೂಜು, ಹುಕ್ಕಾ ಹಾಗೂ ಅಕ್ರಮ ಮದ್ಯ ಮಾರಾಟ ದಂಧೆ ಸೇರಿದಂತೆ ಕಾನೂನು ಬಾಹಿರ ಘಟನೆಗಳ ವಿರುದ್ಧ 15 ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತಕ್ಕೆ ಗಡುವು ನೀಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಜೂಜು ದಂಧೆಗಳ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಬೇಕು. ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಆನ್‌ಲೈನ್‌ನಲ್ಲಿ ಹಣದ ವ್ಯವಹಾರ ನಡೆಯುವ ಆ್ಯಪ್‌ಗಳನ್ನು ಪರಿಶೀಲಿಸಿ ಬೆಟ್ಟಿಂಗ್ ದಂಧೆಕೋರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘಟನೆ ಮುಖಂಡರು ಮಾತನಾಡಿ, ಬೆಟ್ಟಿಂಗ್ ದಂಧೆಗೆ ಪ್ರೇರೆಪಿಸುತ್ತಿದ್ದ ನಾಗೇಂದ್ರ ಎಂಬುವನ ವಿರುದ್ದ 4 ತಿಂಗಳ ಹಿಂದೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಪೊಲೀಸರು ಎಫ್‌ಐಆರ್ ದಾಖಲು ಮಾಡದೇ, ಕೇವಲ ಎನ್‌ಸಿಆರ್ ಮಾಡಿ ಕೈತೊಳೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು. ಇದಲ್ಲದೆ ಈ ಹಿಂದೆ ಬೆಟ್ಟಿಂಗ್ ದಂಧೆಯಲ್ಲಿ ಹಿನ್ನೆಲೆಯಲ್ಲಿ ಮಧು ಮತ್ತು ಅಭಿಷೇಕ್ ಎಂಬುವ ವಿರುದ್ದ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಎಫ್‌ಐಆರ್ ಕೂಡ ಆಗಿತ್ತು. ಆದರೆ ದೋಷಾರೋಪ ಪಟ್ಟಿಯಲ್ಲಿ ಮಧು ಎಂಬಾತನ ಹೆಸರನ್ನು ಕೈಬಿಡಲಾಗಿತ್ತು ಎಂದು ವಕೀಲ ಕಿಶೋರ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದರು. ಕಿಶೋರ್ ಮಾತನಾಡಿ, ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಹೇಗೆ ವಿಚಾರಣೆ ನಡೆಸುತ್ತೀರಿ ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಎಸ್ಪಿ, ಹೆಚ್ಚುವರಿ ದೋಷಾರೋಪಣ ಪಟ್ಟಿ ತಯಾರಿಸಲು ಅವಕಾಶವಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಾಲ ಕೊಟ್ಟು ದಂಧೆಗೆ ಕುಮ್ಮಕ್ಕು: ಮಂಡ್ಯದಲ್ಲಿ ಬೆಟ್ಟಿಂಗ್ ದಂಧೆ ಮಾಡುವವರು ತಾವೇ ಬಡ್ಡಿಗೆ ಹಣವನ್ನು ನೀಡಿ, ಅವರಿಂದ ಖಾಲಿ ಚೆಕ್ ಪಡೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ವೈಮನಸ್ಸು ಉಂಟಾದಾಗ ಇದು ಬೆಟ್ಟಿಂಗ್ ದಂಧೆಯಲ್ಲ, ಹಣದ ವ್ಯವಹಾರ ಎಂದು ಪ್ರಕರಣವನ್ನೇ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಈ ಬಗ್ಗೆ ಅಧಿಕಾರ ಸಭೆ ಕರೆದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಕುಮಾರ ತಿಳಿಸಿದರು.
ಪಿಡಿಒಗೆ ತರಾಟೆ: ತಾಲೂಕಿನ ಬೂದನೂರು ಗ್ರಾಮದ ಬಳಿ ಅನ್ಯಕ್ರಾಂತವಾಗದ ಜಮೀನಿನಲ್ಲಿ ಹುಕ್ಕಾ ಬಾರ್ ನಡೆಸಲು ಪರವಾನಗಿ ಕೊಟ್ಟಿರುವ ಪಿಡಿಒಗೆ ಡಿಸಿ ತರಾಟೆ ತೆಗೆದುಕೊಂಡರು. ಹುಕ್ಕಾ ಬಾರ್ ನಡೆಸುತ್ತಿರುವ ಬಗ್ಗೆ ವಿವಿಧ ಪ್ರಗತಿಪರ ಸಂಘಟನೆಗಳು ಗಮನ ಸೆಳೆದಾಗ, ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಅನ್ಯಕ್ರಾಂತವಾಗದ ಜಮೀನಿಗೆ ಹೇಗೆ ಲೈಸೆನ್ಸ್ ನೀಡಿದ್ದೀರಿ. ಇದು ನಿಮಗೆ ಗೊತ್ತಿಲ್ಲವೇ?. ಇಂತಹ ನಿರ್ಲಕ್ಷೃವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಆಲ್ ಇಂಡಿಯ ಲಾಯರ್ಸ್ ಯೂನಿಯನ್ ಅಧ್ಯಕ್ಷ ಬಿ.ಟಿ.ವಿಶ್ವನಾಥ್, ಕರುನಾಡು ಸೇವಕರು ಸಂಘಟನೆ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಸಚಿನ್, ಚಂದ್ರು, ಸಿಐಟಿಯು ಸಿ.ಕುಮಾರಿ, ಗ್ರಾಪಂ ಮಾಜಿ ಸದಸ್ಯ ಬೂದನೂರು ಸತೀಶ್, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳಿದ್ದರು.