

ಮಂಡ್ಯ: ನಗರದೊಳಗೆ ನಡೆಯುತ್ತಿರುವ ಹಲವು ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ಸರ್ಕಾರದ ವಶಕ್ಕೆ ನೀಡುವಂತೆ ಗುತ್ತಿಗೆದಾರರು, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ರೈಲ್ವೆ ಕೆಳ ಸೇತುವೆ ಕಾಮಗಾರಿ, ತರಕಾರಿ ಮಾರುಕಟ್ಟೆ ಕಾಮಗಾರಿಗಳನ್ನು ಬುಧವಾರ ಶಾಸಕ ರವಿಕುಮಾರ್ ಗಣಿಗ ಮತ್ತು ಅಧಿಕಾರಿಗಳೊಟ್ಟಿಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಕೆಳ ಸೇತುವೆ ಪ್ರಗತಿಯಲ್ಲಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ರವಿಕುಮಾರ್ ಗಣಿಗ ಮಾತನಾಡಿ, ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ರೈಲ್ವೆ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಬೀಳದಂತೆ ಮೇಲ್ಚಾವಣಿಯನ್ನೂ ನಿರ್ಮಿಸಲಾಗುತ್ತಿದೆ. ಮಳೆ ನೀರು ನಿಂತು ಸಂಚಾರಕ್ಕೆ ಅಡಣೆಯಾಗುತ್ತಿದ್ದುದನ್ನು ತಪ್ಪಿಸಲು ಈ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ರೈಲ್ವೆ ಕೆಳ ಸೇತುವೆ ಕಾಮಗಾರಿ ಆಗಸ್ಟ್ ಮೊದಲ ವಾರದೊಳಗೆ ಪೂರ್ಣಗೊಳಿಸಿ ಆ. 15ರಂದು ಲೋಕಾರ್ಪಣೆ ಮಾಡಲು ಸಿದ್ಥತೆ ನಡೆಸಲಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ತರಕಾರಿ ಮಾರುಕಟ್ಟೆ ಕಟ್ಟಡ ಸಂಪೂರ್ಣಗೊಂಡಿದೆ. ಹಿಂದೆ ಇದ್ದ ಹಳೇ ಕಟ್ಟಡ ತೆರವು ಮಾಡುವಾಗ ಎಷ್ಟು ಜನ ವರ್ತಕರಿದ್ದರೋ, ಅವರಿಗೆಲ್ಲರಿಗೂ ಅಂಗಡಿಗಳನ್ನು ಆದ್ಯತೆ ಮೇರೆಗೆ ಕೊಡಬೇಕಿದೆ. ಕೆಲವರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯೊಳಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಇಲ್ಲಿರುವ ಅಂಗಡಿಗಳನ್ನು ಹಂಚಿಕೆ ಮಾಡಬೇಕಿದೆ. ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ ಆ.15ರೊಳಗೆ ಎಲ್ಲರಿಗೂ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಗರಸಭಾ ಸದಸ್ಯರಾದ ಮಂಜುಳಾ, ಶ್ರೀಧರ್, ಟಿ.ಕೆ.ರಾಮಲಿಂಗಯ್ಯ, ಪೂರ್ಣಿಮಾ, ನಯೀಂ, ಆಯುಕ್ತ ಮಂಜುನಾಥ್, ಜಿಲ್ಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ಪ್ರಭಾಕರ್, ಮುಖಂಡರಾದ ಸೋಮು ಸ್ವರ್ಣಸಂದ್ರ, ರುದ್ರಪ್ಪ, ಶಿವನಂಜು ಇತರರಿದ್ದರು.