

ತುಮಕೂರು: ಜಿಲ್ಲೆಯಲ್ಲಿನ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಮಾಡುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ (ಕೋಟ್ಪಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಕಾಲೇಜುಗಳ 100 ಗಜಗಳ ಅಂತರದಲ್ಲಿ ತಂಬಾಕು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.
ಮಕ್ಕಳು ತಂಬಾಕು ಮುಕ್ತ ಸ್ವಸ್ಥ್ಯ ಜೀವನ ನಡೆಸಲು ನಾವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗ್ರಾಮಪಂಚಾಯಿತಿ, ಪಟ್ಟಣಪಂಚಾಯಿತಿ, ನಗರಸಭೆಗಳು, ಪುರಸಭೆಗಳು ಹಾಗೂ ಮಹಾ ನಗರಪಾಲಿಕೆಗಳ ವತಿಯಿಂದ ಅಂತಹ ವರ್ತಕರ ಮೇಲೆ ಕ್ರಮ ತೆಗೆದುಕೊಂಡು, ಉಲ್ಲಂಘನೆಯನ್ನು ಪುನರಾವರ್ತನೆ ಮಾಡಿದ್ದಲ್ಲಿ ಉದ್ದಿಮೆ ಪರವಾನಗಿ ರದ್ದುಮಾಡಬೇಕು ಎಂದರು.
ನಿಯಮಿತವಾಗಿ ಕೋಟ್ಪಾ ಕಾಯ್ದೆ ಕಾರ್ಯಾಚರಣೆ ನಡೆಸಬೇಕು. ಜಿಲ್ಲೆಯಲ್ಲಿನ ಪ್ರತೀ ಶೈಕ್ಷಣಿಕ ಸಂಸ್ಥೆಯನ್ನು ತಂಬಾಕುಮುಕ್ತ ಮಾಡಬೇಕಾಗಿದೆ. ತಂಬಾಕು ಉತ್ಪನ್ನಗಳ ಕುರಿತಾದ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತುಗಳು ಹಾಗೂ ಎಚ್ಚರಿಕೆ ಸಂದೇಶವಿಲ್ಲದ, ವಿದೇಶಿ ಸಿಗರೇಟುಗಳ ಮಾರಾಟದ ಮೇಲೆ ನಿಗಾವಹಿಸಿ, ಉಲ್ಲಂಘನೆಗಳಿಗೆ ಎಫ್.ಐ.ಆರ್. ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಕಂಡ ಕಂಡಲ್ಲಿ ಉಗುಳುತ್ತಿದ್ದು, ಇದು ಅನಾರೋಗ್ಯಕರ ಹಾಗೂ ಅಸಹ್ಯಕರ ಅಭ್ಯಾಸವಾಗಿದೆ. ತಾಲೂಕು ಮಟ್ಟದಲ್ಲಿ ತಿಂಗಳಿಗೆ ಒಂದು ಬಾರಿ ಕೋಟ್ಪಾ ಅನುಷ್ಠಾನ ಕಾರ್ಯಾಚರಣೆ ನಡೆಸಬೇಕು ಹಾಗೂ ಅದರ ಪ್ರಗತಿಪರಿಶೀಲನೆ ನಡೆಸಬೇಕು, ಇದರಿಂದ ತಂಬಾಕು ಕಾಯ್ದೆ ಉಲ್ಲಂಘನೆ ಕಡಿಮೆ ಮಾಡಬಹುದು ಎಂದರು. ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ಬಾಬು ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.
ಜಿಲ್ಲೆಯಲ್ಲಿ 104 ಶಾಲೆಗಳಲ್ಲಿ 18222 ಮಕ್ಕಳಿಗೆ ತಂಬಾಕು ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯ್ದೆ ಕುರಿತು ಅರಿವು ಮೂಡಿಸಲಾಗಿದೆ. ಪ್ರಸ್ತುತ 69 ಅನುಷ್ಠಾನ ಕಾರ್ಯಾಚರಣೆ ನಡೆಸಿ 1699 ಪ್ರಕರಣಗಳ 171070 ದಂಡ ವಿಧಿಸಲಾಗಿದೆ. 1815 ತಂಬಾಕು ವ್ಯಸನಿಗಳಿಗೆ ಆಪ್ತಸಮಾಲೋಚನೆ ನಡೆಸಿ ಚಿಕಿತ್ಸೆನೀಡಲಾಗಿದೆ. ಡಾ.ಮೋಹನ್ ದಾಸ್ ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ