

ತುಮಕೂರು: ಪರೀಕ್ಷೆಯಲ್ಲಿ ಉತ್ತೀರ್ಣವಾದರೆ ಸಾಲದು, ಜೀವನದಲ್ಲೂ ತೇರ್ಗಡೆ ಹೊಂದುವಂತೆ ಮಕ್ಕಳನ್ನು ಅಣಿಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ 2020-21ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಪ್ರೌಢ ಶಾಲಾಶಿಕ್ಷಕರ ಪ್ರಗತಿ ಪರಿಶೀಲನಾ ಹಾಗೂ ಮಾರ್ಗದರ್ಶನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನ ನಿರ್ಮಾಣವು ಶಿಕ್ಷಕರಿಂದಲೇ ಸಾಧ್ಯ. ಅಂತಹ ಶಿಕ್ಷಕರಿಗೆ ಸಲಹೆ ನೀಡುವ ಬದಲು, ಅವರ ಮಾತುಗಳನ್ನು ಆಲಿಸಬೇಕು. ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಿಕೊಡಬೇಕು. ಶಿಕ್ಷಕರು ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ಫಲಿತಾಂಶ ತರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು 14ನೇ ಸ್ಥಾನದಲ್ಲಿದೆ. ಆದರೆ, ಈ ಬಾರಿ ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಯನ್ನು ಉನ್ನತ ಸ್ಥಾನಕ್ಕೇರಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ವಿದ್ಯಾರ್ಥಿಯನ್ನು ತನ್ನ ಮಗುವೆಂದು ಭಾವಿಸಿ, ಉತ್ತಮ ಮಾರ್ಗದರ್ಶನ ನೀಡಬೇಕು. ಕರೊನಾ ಹಿನ್ನೆಲೆಯಲ್ಲಿ ಪಠ್ಯಗಳನ್ನು ಕಡಿತಗೊಳಿಸಿದ್ದು ಪ್ರತಿ ಮಗುವು ಉತ್ತೀರ್ಣರಾಗುವಂತೆ ಸಜ್ಜುಗೊಳಿಸಬೇಕು ಎಂದು ಸಲಹೆಯಿತ್ತರು.
23 ಸಾವಿರ ವಿದ್ಯಾರ್ಥಿಗಳು: ಈ ಬಾರಿ 23 ಸಾವಿರ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಓದಿನಲ್ಲಿ ಹಿಂದಿರುವ ಮಗುವಿಗೆ ಒತ್ತು ನೀಡಬೇಕು. ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಭೌತಿಕವಾಗಿ ಹೆಚ್ಚು ಕಲಿಯದೇ ಇರುವುದರಿಂದ ದೊಡ್ಡ ಸವಾಲು ಶಿಕ್ಷಕರ ಮೇಲಿದೆ. ಹಾಗಾಗಿ, ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಉಳಿದ ಸಮಯದಲ್ಲೇ ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ರಂಗದಾಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಮ್ಮರಾಜು, ರಂಗಧಾಮಯ್ಯ, ಸೋಮಶೇಖರ್, ಕಾತ್ಯಾಯಿನಿ ಉಪಸ್ಥಿತರಿದ್ದರು.
ಸ್ವತಃ ಶಿಕ್ಷಕ ವೃತ್ತಿಯಿಂದ ನಾನು ಬಂದಿದ್ದು, ನನ್ನ ಅಪ್ಪ ಹಾಗೂ ಅಜ್ಜಿ ಕೂಡ ಶಿಕ್ಷಕರಾಗಿದ್ದರು. ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತಿ ಪ್ರಮುಖ. ಜಿಲ್ಲೆಯಲ್ಲಿ ನನ್ನ ಮೊದಲ ಕಾರ್ಯಕ್ರಮ ಶಿಕ್ಷಕರ ಕಾರ್ಯಕ್ರಮವಾಗಿರುವುದು ಸ್ಮರಣೀಯವೆನಿಸಲಿದೆ. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ