

ತುಮಕೂರು: ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಫೆ.20ರಂದು ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಲಕ್ಷ್ಮೀಪುರದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಈ ಗ್ರಾಮದಲ್ಲಿನ ರೈತರ ಜಮೀನುಗಳ ಪಹಣಿ ಲೋಪದೋಷ, ಪಿಂಚಣಿ, ರೇಷನ್ ಕಾರ್ಡ್, ಮತ್ತಿತರ ಜನರ ಸಮಸ್ಯೆಗಳನ್ನು ಖುದ್ದು ಜಿಲ್ಲಾಧಿಕಾರಿ ಆಲಿಸಲಿದ್ದಾರೆ. ಫೆ.20ರ ಬೆಳಗ್ಗೆ 10ರಿಂದ ಆರಂಭವಾಗಲಿರುವ ಜಿಲ್ಲಾಧಿಕಾರಿ ಗ್ರಾಮಭೇಟಿಯಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ, ಮಧುಗಿರಿ ತಾಲೂಕಿನ ತಹಸೀಲ್ದಾರ್, ಕೃಷಿ, ತೋಟಗಾರಿಕೆ, ಆರೋಗ್ಯ, ಆಹಾರ, ಸಮಾಜ ಕಲ್ಯಾಣ ಸೇರಿ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆಯಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಹಿತಿ ನೀಡಲಿದ್ದಾರೆ. ಇದೇ ಮಾದರಿಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡುವ ತಾಲೂಕನ್ನು ಹೊರತುಪಡಿಸಿ ಅಂದೇ ಇತರ ತಾಲೂಕುಗಳ ತಹಸೀಲ್ದಾರರು ಹಾಗೂ ಉಪವಿಭಾಗಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಹಾಗೂ ಹಳ್ಳಿ ವಾಸ್ತವ್ಯ ಮಾಡಲಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ತಹಸೀಲ್ದಾರರು ಹಾಗೂ ಉಪವಿಭಾಗಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸರ್ಕಾರದ ಸುತ್ತೋಲೆಯನ್ವಯ ಫೆ.20ರಂದು ಹಾಗೂ ಪ್ರತಿ ತಿಂಗಳ 3ನೇ ಶನಿವಾರದಂದು ಕೈಗೊಳ್ಳಬೇಕಾಗಿರುವ ಗ್ರಾಮಭೇಟಿ ಹಾಗೂ ಹಳ್ಳಿ ವಾಸ್ತವ್ಯದ ಬಗ್ಗೆ ನಿರ್ದೇಶನ ನೀಡಿದರು.
ತಹಸೀಲ್ದಾರ್‌ಗಳ ಗ್ರಾಮವಾಸ್ತವ್ಯ: ಫೆ.20ರಂದೇ ಆಯಾ ತಾಲೂಕುಗಳಲ್ಲಿ ತಹಸೀಲ್ದಾರ್‌ಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಮುಗ್ಳೂರು, ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮ, ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಬ್ಯಾತಗ್ರಾಮ, ಶಿರಾ ತಾಲೂಕಿನ ಹುಲಿಕುಂಟೆ, ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿಯ ಸಿಂಗೋನಹಳ್ಳಿ, ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ವೆಂಕಟಮ್ಮನಹಳ್ಳಿ, ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ, ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ವಿಜ್ಞಸಂತೆ, ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಜಿ.ಹೊಸಹಳ್ಳಿಯಲ್ಲಿ ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರರು ಗ್ರಾಮಗಳ ಭೇಟಿ ಮತ್ತು ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಉಳಿದ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮವಾಸ್ತವ್ಯ ಮಾಡುವ ಗ್ರಾಮದಲ್ಲಿ ಗ್ರಾಮಸ್ಥರಿಗೆ ಜನರಿಗೆ ಆರೋಗ್ಯ ತಪಾಸಣೆಯನ್ನೂ ಮಾಡಲಾಗುವುದು. ಗ್ರಾಮವಾಸ್ತವ್ಯದ ಬಗ್ಗೆ ಜನರಿಗೆ ಮೊದಲೇ ಮಾಹಿತಿ ನೀಡಬೇಕು. ಆ ಭಾಗದ ಜನಪ್ರತಿನಿಧಿಗಳಿಗೂ ಮಾಹಿತಿ ನೀಡುವಂತೆ ಸೂಚಿಸಿದರು.
ಉಪವಿಭಾಗಾಧಿಕಾರಿ ವಿ.ಅಜಯ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಘು, ಡಿಎಚ್‌ಒ ಡಾ.ನಾಗೇಂದ್ರಪ್ಪ, ತಹಸೀಲ್ದಾರ್ ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.