ಗ್ರಾಮೀಣರ ಸಮಸ್ಯೆ ಪರಿಹಾರದ ಆಶಾಕಿರಣ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಡಿಸಿ ಕೂರ್ಮಾ ರಾವ್ ಅನಿಸಿಕೆ

dc
Published on

ಜನ್ನಾಡಿ: ಗ್ರಾಮೀಣ ಭಾಗದ ಜನರಿಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಜಿಲ್ಲೆ ಅಥವಾ ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ಮುಖತಃ ಭೇಟಿ ಮಾಡಿ ಅಥವಾ ಪತ್ರ ಮುಖೇನ ಪರಿಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಿಂದ ಸ್ಥಳದಲ್ಲಿಯೇ ಹಲವು ಅರ್ಜಿಗಳನ್ನು ಇತ್ಯರ್ಥಪಡಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಹೇಳಿದರು.

ಕುಂದಾಪುರ ತಾಲೂಕು ಹಾರ್ದಳ್ಳಿ- ಮಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. ಶಾಸಕ ಶ್ರೀನಿವಾಸ ಶೆಟ್ಟಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.
ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮಸ್ಥರು ಸಲ್ಲಿಸುವ ಅಹವಾಲುಗಳನ್ನು ಪರಿಶೀಲಿಸಿ ಅಧಿಕಾರಿವರ್ಗ ಹೆಚ್ಚು ನಿಗಾ ವಹಿಸುವುದರಿಂದ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದರು.

ಜಿಲ್ಲಾ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. 18 ಮಂದಿಗೆ ನಿವೇಶನ ಹಕ್ಕುಪತ್ರ, ಸಾಮಾಜಿಕ ಭದ್ರತೆ ನೆಲೆಯಲ್ಲಿ 19 ಮಂದಿಗೆ ಪಿಂಚಣಿ ಆದೇಶ ಪತ್ರ, 15 ಮಂದಿಗೆ ಪಡಿತರ ಚೀಟಿ ವಿತರಿಸಲಾಯಿತು. ತಾಲೂಕು ಉಪತಹಸೀಲ್ದಾರ್ ಎಚ್. ವಿ. ವಿನಯ, ಹಾರ್ದಳ್ಳಿ ಮಂಡಳ್ಳಿ ಗ್ರಾಪಂ ಅಧ್ಯಕ್ಷ ಚಿಟ್ಟೆಬೈಲು ಜಗನ್ನಾಥ್ ಶೆಟ್ಟಿ, ಪಿಡಿಒ ರೇಖಾ, ಕುಂದಾಪುರ ತಾಲೂಕು ಕಂದಾಯ ನಿರೀಕ್ಷಕ ದಿನೇಶ, ಹಾರ್ದಳ್ಳಿ ಮಂಡಳ್ಳಿ ಗ್ರಾಮ ಲೆಕ್ಕಾಧಿಕಾರಿ ಅನಿಲ್ ಕುಮಾರ್, ಸಹಾಯಕ ರಘುರಾಮ ಹುಣ್ಸೆಮಕ್ಕಿ, ಪ್ರಾಂಶುಪಾಲ ವ್ನಿೇಶ್ವರ ಭಟ್, ಉಪಪ್ರಾಂಶುಪಾಲ ಕರುಣಾಕರ ಶೆಟ್ಟಿ ಮೊದಲಾದವರಿದ್ದರು.
ಕುಂದಾಪುರ ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ ಶೆಟ್ಟಿ ಗಾವಳಿ ನಿರೂಪಿಸಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ವಂದಿಸಿದರು.

ಗ್ರಾಮವಾಸ್ತವ್ಯದಿಂದ ಗ್ರಾಮ ಭಾಗದಲ್ಲಿ ಸಾಧನೆ ಮಾಡುವ ಪ್ರತಿಭೆಯನ್ನು ಗುರುತಿಸಿ ಪರಿಚಯಿಸಲು ಸಾಧ್ಯ. ವಾರಾಹಿ ಎಡದಂಡೆ ಕಾಮಗಾರಿ ಭಾಗದಲ್ಲಿ ಮನೆಗಳಿಗೆ ಸಂಪರ್ಕ ರಸ್ತೆ ನಿರ್ಮಿಸಲು ಸಂಬಂಧಪಟ್ಟ ಇಂಜಿನಿಯರ್ ಕಾರ್ಯಪ್ರವೃತ್ತರಾಗಬೇಕು. ಗ್ರಾಪಂ ಅನುದಾನ ಬಳಸಿ ಸ್ಮಶಾನ ನಿರ್ಮಾಣ, ರಸ್ತೆ ಸಂಪರ್ಕ, ದಾರಿ ದೀಪ ನೀಡಲು ಹೆಚ್ಚು ಮುತುರ್ವರ್ಜಿ ವಹಿಸಬೇಕು.
ಕೂರ್ಮಾ ರಾವ್ ಎಂ.,ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net