ಅಲೆಮಾರಿ, ಅರೆ ಅಲೆಮಾರಿಗಳ ಸಮಸ್ಯೆ ಬಗೆಹರಿಸಿ ; ಎಲ್ಲ ತಾಲೂಕುಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

28TMK_DC_Meeting
Published on

ತುಮಕೂರು : ಅಲೆಮಾರಿ, ಅರೆ ಅಲೆಮಾರಿಗಳಿಗೆ ನಿವೇಶನ ನೀಡುವುದು ಸೇರಿ ಅವರ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ಕಲ್ಪಿಸಬೇಕು ಎಂದು ಎಲ್ಲ ತಹಸೀಲ್ದಾರ್‌ಗಳು, ತಾಪಂ ಇಒ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಅಧಿಕಾರಿಗಳ ಜತೆ ಆನ್‌ಲೈನ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಅಲೆಮಾರಿ, ಅರೆ ಅಲೆಮಾರಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಜಿಲ್ಲೆಯಲ್ಲಿ ನಿವೇಶನ ರಹಿತ ಅಲೆಮಾರಿ, ಅರೆ ಅಲೆಮಾರಿಗಳಿಗೆ ನಿವೇಶನ ನೀಡುವುದು ಸೇರಿ ಅವರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮಧುಗಿರಿ ಹಾಗೂ ಕೊರಟಗೆರೆ ತಾಲೂಕುಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ವರದಿಯಾಗಿದ್ದು, ತ್ವರಿತವಾಗಿ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಡಿ 86 ಪ್ರಕರಣ ಬಾಕಿಯಿದ್ದು, ಶೀಘ್ರ ಇತ್ಯರ್ಥಗೊಳಿಸಬೇಕು. ಕಂದಾಯ ಇಲಾಖೆಯ ಬಹುತೇಕ ಸಮಸ್ಯೆಗಳನ್ನು ತಾಲೂಕು ಹಂತದಲ್ಲೇ ಬಗೆಹರಿಸಬೇಕು ಎಂದು ತಿಳಿಸಿದರು.

ಎರಡನೇ ಡೋಸ್ ಶೇ. 96 ಪೂರ್ಣಗೊಂಡಿದ್ದು, 15-17 ವಯಸ್ಸಿನ ಮಕ್ಕಳಿಗೆ ಮೊದಲ ಡೋಸ್ ಶೇ.76 ಹಾಗೂ ಎರಡನೇ ಡೋಸ್ ಶೇ.63 ಲಸಿಕೆ ನೀಡಲಾಗಿದೆ. 12-14 ವಯಸ್ಸಿನ ಮಕ್ಕಳಿಗೆ ಶೇ.27 ಕೊರ್ಬಿವ್ಯಾಕ್ಸ್ ಲಸಿಕಾಕರಣ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಶೇ.100 ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ಡಿಸಿ ತಿಳಿಸಿದರು.

ಮಕ್ಕಳ ಲಸಿಕಾಕರಣವನ್ನು ಏ.10ರೊಳಗಾಗಿ ಮುಗಿಸಬೇಕು ಎಂದು ಆರೋಗ್ಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಉಪವಿಭಾಗಾಧಿಕಾರಿ ವಿ.ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ತಹಶೀಲ್ದಾರ್ ಮೋಹನ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗೇಂದ್ರಪ್ಪ, ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜ್, ಡಾ.ಮೋಹನ್ ದಾಸ್ ಮತ್ತಿತರರು ಇದ್ದರು.

ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ನೀಡುತ್ತಿದೆ. ಜಿಲ್ಲೆಯಲ್ಲಿ ಈವರೆಗೂ 1244 ಅರ್ಜಿಗಳು ಸ್ವೀಕೃತವಾಗಿದ್ದು, 1123 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಕೆ.ಚನ್ನಬಸಪ್ಪ ಅಪರ ಜಿಲ್ಲಾಧಿಕಾರಿ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ಅಲೆಮಾರಿ, ಅರೆ ಅಲೆಮಾರಿಗಳಿಗೆ ಮೀಸಲಿಟ್ಟಿರೋ ಜಾಗದಲ್ಲಿ ಒತ್ತುವರಿ ಮಾಡಿರುವುದು ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಿ, ತಾಪಂ ಇಒ ವರದಿ ನೀಡಬೇಕು. ಡಾ.ಕೆ.ವಿದ್ಯಾಕುಮಾರಿ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net