

ತುಮಕೂರು : ಜಿಲ್ಲೆಯ ಅಂಗಡಿ, ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಕವರ್, ಬ್ಯಾಗ್ ಸೇರಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಾಡಾಗಿದ್ದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ವಸೂಲಾತಿ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಆಗಸ್ಟ್ 2021ರಿಂದ ಈವರೆಗೆ 11 ನಗರಗಳ ಸ್ಥಳೀಯ ಸಂಸ್ಥೆಗಳಲ್ಲಿ 137 ದಾಳಿ ನಡೆಸಲಾಗಿದೆ. 3,545 ಕೆಜಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ. 3.85 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ದಾಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಬೇಕು ಎಂದರು.
ತ್ಯಾಜ್ಯ ವಿಲೇವಾರಿಗೆ ಜಾಗ ಗುರುತು: ಜಿಲ್ಲೆಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ನಗರದ ಸ್ಥಳೀಯ ಸಂಸ್ಥೆಗಳ ಹೊರವಲಯಗಳಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಸ್ಥಳಗಳನ್ನು ಗುರುತಿಸಲಾಗಿದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಮನೆ ಮನೆಗೆ ಭೇಟಿ ನೀಡಿ ಕಸ ಸಂಗ್ರಹಿಸಿ, ವಿಲೇವಾರಿ ಮಾಡಬೇಕು ಎಂದು ಡಿಸಿ ಹೇಳಿದರು.
ಮರುಬಳಕೆ ಮಾಡಿ: ನಗರ ಸ್ಥಳೀಯ ಸಂಸ್ಥೆಗಳಲ್ಲಿ 2,510 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಗದಿತ ವಿಲೇವಾರಿ ಘಟಕಗಳಲ್ಲಿ ಸುಡುವುದು ಮತ್ತು ಮರುಬಳಕೆಯ ವಸ್ತುಗಳಾಗಿ ಮಾರ್ಪಡಿಸಿ ಲಾಭ ಗಳಿಸಲು ಅವಕಾಶವಿದೆ. ಇದನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಹಸಿ ತ್ಯಾಜ್ಯ ಸಂಸ್ಕರಿಸಿ ಮಿಶ್ರಗೊಬ್ಬರ ತಯಾರಿಸುವುದರಿಂದ ಸ್ಥಳೀಯ ಸಂಸ್ಥೆಗಳು ಹೆಚ್ಚು ಆದಾಯ ಗಳಿಸಬಹುದು ಎಂದು ಹೇಳಿದರು.
ನಿಯಮಾನುಸಾರ ತೆರಿಗೆ ಸಂಗ್ರಹಿಸಿ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿದ್ಯುತ್, ಕುಡಿಯುವ ನೀರು ಹಾಗೂ ಕಟ್ಟಡ ತೆರಿಗೆ ಸಂಗ್ರಹಿಸುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವೈ.ಎಸ್. ಪಾಟೀಲ ಸೂಚಿಸಿದರು.
ಟೆಂಡರ್ ತೆರವಿಗೆ ಸಮ್ಮತಿ: ಮಹಾನಗರ ಪಾಲಿಕೆಯ ಮನೆಮನೆ ಕಸ ಸಂಗ್ರಹಣೆಗೆ ಅವಶ್ಯಕವಿರುವ 93 ಆಟೋ ಟಿಪ್ಪರ್‌ಗಳು ಮತ್ತು ದ್ವಿತೀಯ ಹಂತದ ಕಸ ಸಾಗಣಿಕೆಗಾಗಿ 4 ಕಾಂಪ್ಯಾಕ್ಟರ್ ವಾಹನಗಳಿಗೆ ಚಾಲಕರನ್ನು ಒದಗಿಸಲು ಆಹ್ವಾನಿಸಿರುವ ಟೆಂಡರ್ ತೆರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ವಿ. ಅಜಯ್, ಪಿಡಬ್ಲ್ಯುಡಿ, ಎನ್ವಿರಾನ್ಮೆಂಟಲ್ ಇಂಜಿನಿಯರ್‌ಗಳು ಮತ್ತಿತರರಿದ್ದರು.