ಡಿಸಿ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ ; ಸೌಜನ್ಯಕ್ಕೂ ಕಾವೇರಿ ನದಿ ಉತ್ಸವದ ಬಗ್ಗೆ ತಿಳಿಸಿಲ್ಲ ; ಶಾಸಕ ಡಾ.ರಂಗನಾಥ್ ಅಸಮಾಧಾನ

16 kunigal 1
Published on

ಕುಣಿಗಲ್ : ಎಡಿಯೂರು ಹೋಬಳಿ ಶಿಂಷಾ ನದಿ ಪ್ರದೇಶದಲ್ಲಿ ನಡೆಸಲು ಉದ್ದೇಶಿಸಿರುವ ಕಾವೇರಿ ನದಿ ಉತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶಿಷ್ಟಾಚಾರ ಉಲ್ಲಂಸಿದ್ದು, ಕಾರ್ಯಕ್ರಮ ಸರ್ಕಾರದ್ದೋ ಅಥವಾ ಬಿಜೆಪಿಯದ್ದೋ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಪ್ರಶ್ನಿಸಿದರು.

ಪಟ್ಟಣದ ದೊಡ್ಡಪೇಟೆ ಹಾಗೂ ಕೆಆರ್‌ಎಸ್ ಅಗ್ರಹಾರದ 22ನೇ ವಾರ್ಡ್‌ನಲ್ಲಿ 14ನೇ ಹಣಕಾಸು ಯೋಜನೆಯಡಿ ಗುರುವಾರ 21.25 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಡಾಂಬರೀಕರಣ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನನ್ನ ಕ್ಷೇತ್ರದಲ್ಲಿ ನಡೆಸಲು ಉದ್ದೇಶಿಸಿರುವ ಕಾವೇರಿ ನದಿ ಉತ್ಸವದ ಬಗ್ಗೆ ನನಗೆ ಮಾಹಿತಿ ಇಲ್ಲ. ಜಿಲ್ಲಾಧಿಕಾರಿ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಶಿಂಷಾ ನದಿ ದಡದಲ್ಲಿ ಕಾವೇರಿ ನದಿ ಉತ್ಸವ ಹಮ್ಮಿಕೊಂಡಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಜಿಲ್ಲಾಧಿಕಾರಿ ಬಗ್ಗೆ ನನಗೆ ಗೌರವವಿದೆ. ಆದರೆ ಕಾರ್ಯಕ್ರಮ ಸಂಬಂಧ ಸೌಜನ್ಯಕ್ಕಾದರೂ ನನಗೆ ಮಾಹಿತಿ ನೀಡಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಕಾರ್ಯಕ್ರಮ ರದ್ದಾಗಿದೆ ಎಂದು ಹೇಳುತ್ತಾರೆ. ಡಿಸಿ ನಡೆಯಿಂದ ನೋವಾಗಿದೆ ಎಂದರು.

ನಿವೇಶನ ಹಂಚಿಕೆಗೆ ಕ್ರಮ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಬಡವರಿಗೆ ಒಂದು ಮನೆ ನೀಡಿಲ್ಲ. ಬಡವರು ವಸತಿಗಾಗಿ ಪರಿತಪ್ಪಿಸುವಂತಾಗಿದೆ. ವಸತಿ ಸಚಿವ ವಿ.ಸೋಮಣ್ಣ ಅವರನ್ನು ನಾನು ಮತ್ತು ಸಂಸದ ಡಿ.ಕೆ.ಸುರೇಶ್ ಭೇಟಿಯಾಗಿ ಮನೆ ನೀಡುವಂತೆ ಮನವಿ ಮಾಡಿದ್ದೇವೆ. ಆದರೂ ಈವರೆಗೂ ಒಂದು ಮನೆಯನ್ನೂ ನೀಡಿಲ್ಲ. ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಪಟ್ಟಣದಲ್ಲಿ 600 ನಿವೇಶನ ಗುರುತಿಸಿದ್ದು, ಇದರ ತೆಗೆ ಮತ್ತು 600 ನಿವೇಶನ ಗುರುತಿಸಿ ಸುಮಾರು 1200 ನಿವೇಶನಗಳನ್ನು ನಿವೇಶನ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದೆಂದು ಶಾಸಕ ರಂಗನಾಥ್ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಸದಸ್ಯರಾದ ರಂಗಸ್ವಾಮಿ, ರಾಮುಣ್ಣ, ಕೆ.ಆರ್.ಜಯಲಕ್ಷ್ಮೀ, ನಾಗೇಂದ್ರ, ಬಿ.ಎನ್.ಅರುಣ್‌ಕುಮಾರ್, ಮಲ್ಲಿಪಾಳ್ಯ ಶ್ರೀನಿವಾಸ್, ಕೆ.ಎಸ್.ಕೃಷ್ಣ, ಮಂಜುಳಾ, ಮಾಜಿ ಸದಸ್ಯರಾದ ರೆಹಮಾನ್ ಷರೀಪ್, ಪಾಪಣ್ಣ, ಸತೀಶ್, ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ಬೋರೇಗೌಡ ಇದ್ದರು.

ಡಿಸಿ ಅಪಮಾನ ಮಾಡಿದ್ದಾರೆ, ಕ್ರಮವೇನು? :  ಬಿಜೆಪಿ ಸರ್ಕಾರದಲ್ಲಿ ಶಾಸಕರಿಗೆ ಗೌರವ ಇಲ್ಲದಂತಾಗಿದೆ. ಸಂಡೂರು ಕ್ಷೇತ್ರದ ಶಾಸಕ ತುಕಾರಾಂ ಅವರನ್ನು ಅಲ್ಲಿನ ತಹಸೀಲ್ದಾರ್ ರಶ್ಮಿ ಅಪಮಾನ ಮಾಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಇದರಿಂದ ಎಚ್ಚೆತುಕೊಂಡ ಸರ್ಕಾರ ತಹಸೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಕೈತೊಳೆದುಕೊಂಡಿದೆ. ಈಗ ಜಿಲ್ಲಾಧಿಕಾರಿ ನಮ್ಮನ್ನೂ ಅಪಮಾನ ಮಾಡಿದ್ದಾರೆ. ಇದರ ಬಗ್ಗೆ ಸರ್ಕಾರ ಏನು ಕ್ರಮಕೈಗೊಳ್ಳಲಿದೆ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಇಂತಹ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಜನಪ್ರತಿನಿಧಿಗಳಿಗೆ ಗೌರವ ಇಲ್ಲದಂತಾಗಿದೆ. ಸರ್ಕಾರಕ್ಕೆ ನನ್ನ ಧಿಕ್ಕಾರವಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾದರೂ, ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆಯಾಗಿಲ್ಲ. ಹಿಂದಿನ ಮುಖ್ಯಮಂತ್ರಿ ಅವರ ರೀತಿಯಲ್ಲಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಲಿಂಕ್ ಕೆನಾಲ್ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಡಾ.ಎಚ್.ಡಿ.ರಂಗನಾಥ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net