ಕೇರಳ ಮೂಲದ 8 ವಿದ್ಯಾರ್ಥಿಗಳಲ್ಲಿ ಕರೊನಾ ; ಆತಂಕದಲ್ಲಿ ಕಲ್ಪತರು ನಾಡು ; ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷೆ ಕಡ್ಡಾಯ

29TMK_Dc_meeting
Published on

ತುಮಕೂರು ; ಜಿಲ್ಲೆಯ ನರ್ಸಿಂಗ್ ಕಾಲೇಜುಗಳಿಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿರುವ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ. ಕಳೆದೊಂದು ತಿಂಗಳಲ್ಲಿ ಜಿಲ್ಲೆಗೆ ಬಂದಿರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ಕಡ್ಡಾಯಗೊಳಿಸಿ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೊನಾ ನಿಯಂತ್ರಣ ಸಂಬಂಧ ಅಧಿಕಾರಿಗಳ ಜತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಯಲು ಪದವಿ, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದರು.

ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಲಸಿಕೆ ಪಡೆಯುವುದು ಕಡ್ಡಾಯವಾಗಿದ್ದು, ಕನಿಷ್ಠ ಒಂದು ಡೋಸ್ ಪಡೆಯದೇ ಇರುವ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡುವಂತಿಲ್ಲ. ವಿದ್ಯಾರ್ಥಿಗಳು ಲಸಿಕೆ ಪಡೆಯದೇ ಇದ್ದು, ಅಂತಹ ಕಾಲೇಜುಗಳಲ್ಲಿ ಕರೊನಾ ಹೆಚ್ಚಳವಾದರೆ ಸಂಬಂಧಿಸಿದ ಪ್ರಾಚಾರ್ಯ, ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಸರ್ಕಾರಿ ಕಚೇರಿ, ಮಾಲ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್, ಈಜುಕೊಳ, ಸಾರ್ವಜನಿಕ ಗ್ರಂಥಾಲಯ, ವ್ಯಾಪಾರ-ವಹಿವಾಟು ಮಳಿಗೆ, ಅಂಗಡಿ-ಮುಗ್ಗಟ್ಟು, ಖಾಸಗಿ ಕಂಪನಿ, ಶಾಲಾ-ಕಾಲೇಜುಗಳಲ್ಲಿನ ಶಿಕ್ಷಕರು, ಸಿಬ್ಬಂದಿ ಸೇರಿ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವವರು ಎರಡನೇ ಡೋಸ್ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಎರಡೂ ಡೋಸ್ ಲಸಿಕೆ ಪಡೆಯದೇ ಇದ್ದಲ್ಲಿ ಅಂತಹವರು ಕೆಲಸ ಕಾರ್ಯ ನಿರ್ವಹಿಸಲು ಅನುಮತಿ ನೀಡುವಂತಿಲ್ಲ ಎಂದರು.

ವ್ಯಾಪಾರ, ವಹಿವಾಟು ನಡೆಸುವ ವ್ಯಾಪಾರಸ್ಥರು ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆದಿರಬೇಕು, ಲಸಿಕೆ ಪಡೆಯದೆ ವ್ಯಾಪಾರ, ವಹಿವಾಟು ನಡೆಸುವಂತಿಲ್ಲ. ಒಂದು ವೇಳೆ ಲಸಿಕೆ ಪಡೆಯದಿದ್ದಲ್ಲಿ ಅಂತಹ ವ್ಯಾಪಾರಸ್ಥರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಮೂರು ದಿನ ಲಸಿಕಾ ಮೇಳ : ಜಿಲ್ಲೆಯಲ್ಲಿ ಮಂಗಳವಾರ, ಬುಧವಾರ ಮತ್ತು ಗುರುವಾರ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಶೇ.91 ಮೊದಲ ಡೋಸ್ ಲಸಿಕೆ ಹಾಗೂ ಶೇ.63 ಎರಡನೇ ಡೋಸ್ ಲಸಿಕಾಕರಣ ಯಶಸ್ವಿಯಾಗಿದ್ದು, ನೂರರಷ್ಟು ಲಸಿಕಾರಣ ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಶ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಲಸಿಕೆ ಪಡೆಯಲು ಅರ್ಹರನ್ನು ಗುರುತಿಸಿ, ಮೊದಲ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯುವವರು ಈ ಮೆಘಾ ಮೇಳದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು. ಮೇಳ ಯಶಸ್ವಿಗೆ ಶಿಕ್ಷಕರು, ನ್ಯಾಯಬೆಲೆ ಅಂಗಡಿ, ಸಹಕಾರ ಸಂಘಗಳು ಸೇರಿ ಹಾಲು ವಿತರಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಖ್ಯವಾಗಿ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಮೇಳದ ಯಶಸ್ಸಿಗೆ ಶ್ರಮಿಸಬೇಕು. ಲಸಿಕಾಕರಣ ಕಾರ್ಯದಲ್ಲಿ ಬೇಜವಾಬ್ದಾರಿ ತೋರಿದರೆ ಕ್ರಮ ವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net