

ತುಮಕೂರು : ಕಳೆದೊಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 90 ಸಾವಿರದಿಂದ 1ಲಕ್ಷ ಹೆಕ್ಟೇರ್ ಪ್ರದೇಶದವರೆಗೂ ಕೃಷಿ ಬೆಳೆ ಹಾನಿಗೊಳಗಾಗಿದ್ದು, ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ನಡೆಸಿರುವ ಪ್ರಾಥಮಿಕ ಸಮೀಕ್ಷೆ ಅನುಸಾರ ಜಿಲ್ಲೆಯಲ್ಲಿ 90 ಸಾವಿರ ಹೆ. ನಿಂದ 1ಲಕ್ಷ ಹೆ.ವರೆಗೆ ಕೃಷಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ 400 ರಿಂದ 450 ಮನೆಗಳು ಭಾಗಶಃ ಪೂರ್ಣ ಹಾನಿಯಾಗಿದೆ ಎಂದು ಆಯಾ ತಹಸೀಲ್ದಾರರು ಪ್ರಾಥಮಿಕ ವರದಿ ನೀಡಿದ್ದು, ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವ ಮನೆಗಳ ಫಲಾನುಭವಿಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದರಲ್ಲದೇ, ಸೂಕ್ತ ಕಾಲದಲ್ಲಿ ಪರಿಹಾರದ ಸೌಲಭ್ಯಗಳು ಸರಿಯಾದ ಕ್ರಮದಲ್ಲಿ ತಲುಪುವಂತೆ ನಿಗಾವಹಿಸಿ ಎಂದರು.
ನೆರೆ ಹಾನಿ ಕುರಿತು ಸುಳ್ಳು ಮಾಹಿತಿ ನೀಡಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು, ಅನಿರೀಕ್ಷಿತ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಸಂಭವಿಸಿರುವ ನೆರೆ ಹಾನಿ ಕುರಿತಂತೆ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಾಲೆ, ರಸ್ತೆ, ಕೆರೆ, ಅಂಗನವಾಡಿ ಕಟ್ಟಡ ಸೇರಿ ಹಾನಿಗೆ ಒಳಗಾಗಿರುವ ಸಾರ್ವಜನಿಕ ಆಸ್ತಿಗಳ ಬಗ್ಗೆ 3 ದಿನಗಳಲ್ಲಿ ಮಾಹಿತಿ ಒದಗಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಎನ್.ರಾಜಸುಲೋಚನ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಘು ಮತ್ತಿತರರ ಅಧಿಕಾರಿಗಳು ಇದ್ದರು.