ಘಂಟೆಹೊಸಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮೇಲೆ ಹಲ್ಲೆ

dpt crime
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಮರಣ ಪ್ರಮಾಣ ಪತ್ರ ಪರಿಶೀಲನೆಗೆಂದು ಘಂಟೆಹೊಸಹಳ್ಳಿಗೆ ತೆರಳಿದ್ದ ಗ್ರಾಮ ಲೆಕ್ಕಾಧಿಕಾರಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.
ಸೋಂಪುರ ಹೋಬಳಿ ಕಂಬಾಳು ವೃತ್ತದ ಗ್ರಾಮಲೆಕ್ಕಾಧಿಕಾರಿ ಗೋಪಾಲ್ ಎಂಬುವರ ಮೇಲೆ ಹಲ್ಲೆ ನಡೆದಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮದ ಕೃಷ್ಣಪ್ಪ ಎಂಬುವರು ಹಲ್ಲೆ ನಡೆಸಿದ್ದು, ಕರ್ತವ್ಯದ ವೇಳೆ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಂಬಾಳು ಬಳಿಯ ಘಂಟೆಹೊಸಹಳ್ಳಿಯಲ್ಲಿ ಮೃತಪಟ್ಟ ವ್ಯಕ್ತಿಯ, ಮರಣ ದೃಢೀಕರಣ ಮಹಜರು ವೇಳೆ ಹಲ್ಲೆ ನಡೆದಿದೆ, ಆರೋಪಿ ಕೃಷ್ಣಪ್ಪನ ಸಹೋದರ ಹನುಮಂತರಾಯಪ್ಪ ಎಂಬುವರ ಮಗ ಚಿದಂಬರ ಎಂಬುವರ ಮರಣ ಪ್ರಮಾಣ ಪತ್ರ ಪರಿಶೀಲನೆ ವೇಳೆ ಈ ಪ್ರಕರಣ ನಡೆದಿದೆ.
ಸರ್ಕಾರಿ ಕೆಲಸಕ್ಕೆ ಅಡ್ಡಿ ಸರಿಯಲ್ಲ:
ಹಲ್ಲೆಗೊಳಗಾದ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್ ಅವರ ಆರೋಗ್ಯ ವಿಚಾರಿಸಿದ್ದೇನೆ, ಸದ್ಯ ಚೇತರಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಅರುಂಧತಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸುವುದು ಅಕ್ಷಮ್ಯ. ಸಮಸ್ಯೆ ಇದ್ದರೆ ಮೇಲಧಿಕಾರಿಗೆ ತಿಳಿಸಬಹುದಿತ್ತು. ಸರ್ಕಾರಿ ಅಧಿಕಾರಿಗಳಿಗೆ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಆಗ ಮಾತ್ರ ಜನಸ್ನೇಹಿಯಾಗಿ ಕೆಲಸ ಮಾಡಲು ಸಾಧ್ಯ. ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net