

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ.
ಸರ್ಕಾರಿ ಜಮೀನನ್ನು ಕಬಳಿಸುತ್ತಿರುವವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣಕ್ಕೆ ಅಪಘಾತದ ನೆಪದಲ್ಲಿ ಸಾಮಾಜಿಕ ಕಾರ್ಯಕರ್ತ ರಾಮಾಂಜಿನಪ್ಪ ಅವರ ಕೊಲೆಗೆ ಯತ್ನಿಸಿರುವ ಭೂಗಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಹನುಮಣ್ಣಗೂಳ್ಯ ಒತ್ತಾಯಿಸಿದರು.
ರಾಮಾಂಜಿನಪ್ಪ ಬೈಕ್ ನಲ್ಲಿ ಹೋಗುವಾಗ ಹಾಡೋನಹಳ್ಳಿ ಮೂಲದ ಶರತ್‌ಕುಮಾರ್ ಎಂಬಾತ ಕಾರಿನಲ್ಲಿ ಹಿಂಬಾಲಿಸಿ ಮೋಪರಹಳ್ಳಿ ಗ್ರಾಮದ ಬಳಿ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾನೆ. ಅಪಘಾತದ ಬಳಿಕ ಸ್ಥಳೀಯರು ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಯೂ ಮಾರ್ಗ ಮಧ್ಯೆ ರೌಡಿಗಳನ್ನು ಕರೆಯಿಸಿ ರಕ್ತದ ಮಡುವಿನಲ್ಲಿದ್ದ ರಾಮಾಂಜಿನಪ್ಪ ಅವರೇ ಅಪಘಾತ ಮಾಡಿದ್ದಾನೆ ಎಂದು ವಿನಾಕಾರಣ ಗಲಾಟೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡದಂತೆ ವೈದ್ಯರಿಗೂ ಬೇದರಿಕೆ ಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕೊಲೆಗೆ ಯತ್ನಿಸಿದ್ದರು: ಸಾಮಾಜಿಕ ಕಾರ್ಯಕರ್ತ ರಾಮಾಂಜಿನಪ್ಪ ಮಾತನಾಡಿ ಕಾರು ಗುದ್ದಿದ ರಭಸಕ್ಕೆ ತೀವ್ರ ಪೆಟ್ಟಾಗಿದೆ. ಬೈಕ್ ಮೇಲೆ ಕಾರನ್ನು ಹತ್ತಿಸಿದ ಶರತ್ ಕುಮಾರ್ ಸುಮಾರು 20 ಮೀಟರ್‌ನಷ್ಟು ದೂರ ಎಳೆದೊಯ್ದಿದ್ದಾನೆ. ಉದ್ದೇಶಪೂರ್ವಕವಾಗಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತ ರಾಮಾಂಜಿನಪ್ಪ ಆರೋಪಿಸಿದರು. ಕುಂದಾಣ ಹೋಬಳಿಯ ಚಿಕ್ಕಓಬದೇನಹಳ್ಳಿ ಗ್ರಾಮದ ಸರ್ಕಾರಿ ಗ್ರಾಮಠಾಣಾದ 8 ಎಕರೆ ಜಮೀನನ್ನು ಕಬಳಿಕೆ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಸರ್ಕಾರಕ್ಕೆ 20 ಕೋಟಿ ರೂ. ನಷ್ಟಮಾಡಿರುವ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಬೀರಪ್ಪನ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಲೋಕಾಯುಕ್ತದಲ್ಲಿ ಬೀರಪ್ಪ ಸೇರಿ ಮೂವರ ವಿರುದ್ಧ 10 ವರ್ಷದಿಂದ ವಿಚಾರಣೆ ನಡೆಯುತ್ತಿದೆ. ಇದೇ ದ್ವೇಷದಿಂದ ಬೀರಪ್ಪ ನನ್ನನ್ನು ಕೊಲೆ ಮಾಡಲು ಸುಾರಿ ನೀಡಿದ್ದಾರೆ ಎಂದು ಆರೋಪಿಸಿದರು. ಆರೋಪಿಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದೇನೆ. ನನಗೆ ಪ್ರಾಣ ಬೆದರಿಕೆ ಇರುವುದರಿಂದ ಸಂಬಂಧಪಟ್ಟವರು ಜೀವರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.